ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಕೇಳಿದ್ದೆ ನಾನು ನಿನ್ನೆ. ಆತನ ಮೇಲೆ ಯಾವುದಾದರೂ ದೂರುಗಳಿದ್ದರೆ, ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆ ಸಿಬ್ಬಂದಿಗೆ ನೀಡಲಾಗುವ ಕೇಂದ್ರ ಗೃಹ ಸಚಿವಾಲಯದ ಪ್ರಶಸ್ತಿಗೆ ಪಾತ್ರರಾದ ವಿಜೇತರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಎಂಬುವರ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮಾಹಿತಿ ಇರಬೇಕು. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಅಲ್ಲವೆ. ನನಗೆ ಅವರನ ಪರಿಚಯವಿಲ್ಲ. ಹೆಚ್ಡಿಕೆ ಅವಧಿಯಲ್ಲೇ ಅವನು ಎಲ್ಲ ವ್ಯವಹಾರಗಳನ್ನು ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ. ಏನೇ ಇದ್ದರೂ ಕಾನೂನು ಕ್ರಮ ವಹಿಸಲಾಗುವುದು ಎಂದರು.
ಆತ ಯಾವುದಾದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರತಿನಿತ್ಯ ನನ್ನನ್ನು ನೂರಾರು ಜನರು ಅಹವಾಲು ಸಲ್ಲಿಸಲು ಭೇಟಿಯಾಗುತ್ತಾರೆ. ನನ್ನ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಕಾಣಲು ಬರುವ ಎಲ್ಲರ ಹಿನ್ನೆಲೆ ಅಥವಾ ಅವರ ಚರಿತ್ರೆ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ. ಫೋಟೋ ತೆಗೆಸಿಕೊಳ್ಳುವವರ ಜೊತೆ ಸರ್ಟಿಫಿಕೇಟ್ ತೆಗೆದುಕೊಂಡು ಬನ್ನಿ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಎಂದ ಮಾತ್ರಕ್ಕೆ ನನಗೆ ಪರಿಚಯವಿದೆ ಎಂದರ್ಥವಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲಿಯೇ, ಸೇವಾನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದೆ ಎಂದ ಸಚಿವರು, ಇಂದು ಪ್ರದಾನ ಮಾಡಲ್ಪಟ್ಟ ಗೌರವಗಳು ಪೊಲೀಸ್ ಇಲಾಖೆ ಸಿಬ್ಬಂದಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ. ಇಲಾಖೆಯ ಸಿಬ್ಬಂದಿ ದಕ್ಷತೆ ಹೆಚ್ಚಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಆದ್ಯತೆಯ ಮೇಲೆ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ, ಡಿಜಿಪಿ ಪ್ರವೀಣ್ ಸೂದ್, ಅಪರ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.