ಬೆಂಗಳೂರು:ಕಾನೂನು ಸಂಘರ್ಷಕ್ಕೆ ಸಿಲುಕಿದ ಅಪ್ರಾಪ್ತರ ವಿಚಾರಣೆ ನಡೆಸುವಾಗ ಮತ್ತು ಅವರಿಂದ ಸಾಕ್ಷಿ ಸಂಗ್ರಹಿಸುವ ಸಂದರ್ಭಗಳಲ್ಲಿ ಪೊಲೀಸರು, ವಕೀಲರಷ್ಟೇ ಅಲ್ಲದೆ ನ್ಯಾಯಾಧೀಶರು ಕೂಡ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟರು.
ಬೆಂಗಳೂರಿನ ನ್ಯಾಯಾಂಗ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡಲಿಕ್ಕಾಗಿ ರೂಪಿಸಿರುವ 3 ಮನೋ ಸಾಮಾಜಿಕ ಕೈಪಿಡಿಗಳನ್ನು ಬಿಡುಗಡೆ ಮಾಡಿದ ನ್ಯಾ. ಮಿಶ್ರಾ ಅವರು, ಲೈಂಗಿಕ ಶೋಷಣೆಗೆ ಒಳಗಾದ ಮಕ್ಕಳನ್ನು ಕಾನೂನಾತ್ಮಕ ವಿಚಾರಣೆಗೆ ಒಳಪಡಿಸುವಾಗ ಅಥವಾ ಅವರಿಂದ ಸಾಕ್ಷಿ ಸಂಗ್ರಹಿಸುವಾಗ ಹೆಚ್ಚು ಜಾಗರೂಕತೆ ವಹಿಸಬೇಕು. ಎಲ್ಲೂ ಕೂಡಾ ಮಗುವಿನ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬಾಲ ನ್ಯಾಯ (ಕಾಳಜಿ ಮತ್ತು ರಕ್ಷಣೆ) ಕಾಯ್ದೆ-2015ರ ಬಗ್ಗೆ ವಿವರಿಸುತ್ತಾ, ಬಾಲಪರಾಧ ಎಸಗಿದ ಮಕ್ಕಳನ್ನು ಅಪರಾಧಿಗಳಂತೆ ನೋಡದೆ ಅವರನ್ನು ಕೇವಲ ಮಕ್ಕಳಾಗಿಯೇ ನೋಡಬೇಕು. ಪೂರ್ವನಿರ್ಧಾರಿತ ಮನಸ್ಥಿತಿಯಲ್ಲಿ ಅವರನ್ನು ನೋಡಿದರೆ ಅವರ ಭವಿಷ್ಯ ಮಸುಕಾಗಿಬಿಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ಪೂರ್ವಭಾವನೆಗೆ ಒಳಗಾಗದೆ ಸಹಾನುಭೂತಿಯಿಂದ ನ್ಯಾಯದಾನ ಮಾಡಬೇಕು. ಅವರಿಗೆ ಅವಶ್ಯವಿರುವ ಕಾನೂನು ನೆರವು ನೀಡಬೇಕು ಎಂದರು.