ಬೆಂಗಳೂರು: ಪ್ರತಿವರ್ಷದಂತೆ ಈ ಸಾರಿಯೂ ದೀಪಾವಳಿ ಆಚರಣೆ ಸಂದರ್ಭ ಪಟಾಕಿ ಸಿಡಿಸುವ ಸಮಯಕ್ಕೆ ಒಂದು ಮಿತಿ ಹೇರಲಾಗಿದೆ. ಸಾರ್ವಜನಿಕರು ಈ ಕಾಲಮಿತಿಯಲ್ಲೇ ತಮ್ಮ ಪಟಾಕಿ ಸಿಡಿಸುವ ಉತ್ಸಾಹವನ್ನು ತಣಿಸಿಕೊಳ್ಳುವಂತೆ ತಾಕೀತು ಮಾಡಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಜನತೆ ಅಪಾರ ಪ್ರಮಾಣದಲ್ಲಿ ಪಟಾಕಿ ಸುಡುವುದು ವಾಡಿಕೆ. ಮಕ್ಕಳು - ಹಿರಿಯರೆನ್ನದೇ ಪ್ರತಿಯೊಬ್ಬರೂ ರಸ್ತೆಗಿಳಿದು, ಮನೆಯ ತಾರಸಿ ಏರಿ ಪಟಾಕಿ ಸುಡುವ ಮೂಲಕ ಹಬ್ಬವನ್ನು ದೊಡ್ಡ ಮಟ್ಟದ ಸದ್ದು ಗದ್ದಲದೊಂದಿಗೆ ಆಚರಿಸಿ ಸಂಭ್ರಮಿಸುತ್ತಾರೆ.
ಆದರೆ, ಇದರಿಂದಾಗಿ ಶಬ್ದ, ವಾಯು ಮಾಲಿನ್ಯ ಅಪಾರ ಪ್ರಮಾಣದಲ್ಲಿ ಆಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಸಿರು ಪಟಾಕಿ ಬಳಕೆಗೆ ಕಳೆದ ಆರೇಳು ವರ್ಷದಿಂದ ಉತ್ತೇಜನ ನೀಡುತ್ತ ಬಂದಿದೆ. ಜತೆಗೆ ದೊಡ್ಡ ಸದ್ದು ಮಾಡುವ ಪಟಾಕಿಗಳನ್ನು ನಿಷೇಧಿಸಿದೆ. ಎಲ್ಲಂದರಲ್ಲಿ ಪಟಾಕಿ ಸಿಗದಂತೆ ಎಚ್ಚರ ವಹಿಸಿದೆ. ಆದಾಗ್ಯೂ ಜನ ಮಳೆ ಇಲ್ಲ ಅಂದರೆ ಭರ್ಜರಿಯಾಗಿ ಪಟಾಕಿ ಸಿಡಿಸಿ ಆಚರಣೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.
ಎಷ್ಟೇ ಮುಂಜಾಗ್ರತೆ ಕೈಗೊಂಡರೂ ಕಿವಿಗೊಡದ ಜನ:ವಾಯುಮಾಲಿನ್ಯದ ಜತೆ ಜತೆಗೆ ಮಕ್ಕಳು, ಹಿರಿಯರು ಪಟಾಕಿ ಸಿಡಿತದಿಂದ ಎದುರಿಸುವ ಅಪಾಯ ತಡೆಯಲು ಸರ್ಕಾರ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಸೂಚಿಸಿದರೂ, ನಿಯಮವನ್ನು ಜಾರಿಗೆ ತಂದರೂ ಜನ ಅದನ್ನು ಗಾಳಿಗೆ ತೂರುತ್ತಿದ್ದಾರೆ. ಪ್ರತಿವರ್ಷ ಹೊಸದೊಂದು ಪ್ರಯತ್ನಕ್ಕೆ ಮುಂದಾಗುವ ಸರ್ಕಾರ ನಗರದ ಮಾಲಿನ್ಯ ನಿಯಂತ್ರಣವನ್ನು ಪ್ರಮುಖ ಆದ್ಯತೆಯಾಗಿ ಇರಿಸಿಕೊಂಡು ಪಟಾಕಿ ಸಿಡಿಸುವುದಕ್ಕೆ ಕಾಲಮಿತಿ ನಿಗದಿಪಡಿಸಿದೆ.
ಗಾಳಿ ಮತ್ತು ಶಬ್ದ ಮಾಲಿನ್ಯ ತಡೆಯಲು ಹಾಗೂ ಇದನ್ನು ವಿಶೇಷ ಕಾಳಜಿಯೊಂದಿಗೆ ನಿಗಾ ವಹಿಸಲು ಸರ್ಕಾರ ಬೆಂಗಳೂರು ನಗರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಕೆಲ ನಿರ್ಬಂಧ ಹೇರಿದೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳೊಂದಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಾಗರಿಕರಿಗೆ ಕೇವಲ ಎರಡು ಗಂಟೆ ಅಂದರೆ ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ.
ಸಮಯ ಮಿತಿ ಪಾಲಿಸುವಂತೆ ಸೂಚನೆ: ಈ ಎರಡು ಗಂಟೆಗಳಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡುವಂತೆ ಕೆಎಸ್ಪಿಸಿಬಿ, ಬಿಬಿಎಂಪಿ, ಬೆಂಗಳೂರು ಜಿಲ್ಲಾಡಳಿತ ಮತ್ತು ಪೊಲೀಸ್ ಆಯುಕ್ತರಂತಹ ಜಾರಿ ಸಂಸ್ಥೆಗಳಿಗೆ ಪತ್ರಗಳನ್ನು ಬರೆದು ಸಮಯಮಿತಿ ಪಾಲಿಸುವಂತೆ ಸೂಚಿಸಿದೆ. ಇದಲ್ಲದೇ ಇನ್ನೊಂದು ಪ್ರಮುಖ ಕ್ರಮವಾಗಿ ಕೆಎಸ್ಪಿಸಿಬಿ ಬೆಂಗಳೂರಿನಲ್ಲಿ ಕೇವಲ 'ಹಸಿರು ಪಟಾಕಿ' ಮಾರಾಟಕ್ಕೆ ಅನುಮತಿ ನೀಡುವಂತೆ ಪಟಾಕಿ ಮಾರಾಟದ ಏಜೆನ್ಸಿಗಳಿಗೆ ನಿರ್ದೇಶಿಸಿದೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಮೇಲ್ವಿಚಾರಣೆ ಮಾಡಲು ವೈಜ್ಞಾನಿಕ ಅಧಿಕಾರಿಯನ್ನು ನೇಮಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿಯ ಮೊದಲು ಮತ್ತು ಏಳು ದಿನಗಳ ನಂತರ ಗಾಳಿ/ಧ್ವನಿ ಮಟ್ಟಗಳ ಗುಣಮಟ್ಟ ನಿರ್ಣಯಿಸುತ್ತದೆ. ರಿಟ್ ಅರ್ಜಿ 728/2015 ಗೆ ಸಂಬಂಧಿಸಿದಂತೆ ಅಕ್ಟೋಬರ್ 2018 ರಲ್ಲಿ ನೀಡಲಾದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಮಾಲಿನ್ಯ ನಿಗಾ ಸಂಸ್ಥೆಯು ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಏಜೆನ್ಸಿಗಳಿಗೆ ನಿರ್ದೇಶನ ನೀಡಿದೆ.
ಸುಪ್ರೀಂ ನಿರ್ದೇಶನ ಪಾಲನೆಗೆ ಈ ನಿಯಮ ಜಾರಿ:ಸುಪ್ರೀಂಕೋರ್ಟ್ ನಿರ್ದೇಶನ ಪಾಲನೆಗೆ ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಹಬ್ಬದ ಸಂದರ್ಭದಲ್ಲಿ ಈ ನಿಯಮ ಜಾರಿಯಲ್ಲಿ ಇರಿಸಲಿದೆ ಮತ್ತು ಹಸಿರು ಪಟಾಕಿ ಮಾರಲು ಮಾತ್ರ ಅವಕಾಶ ನೀಡಿದೆ. ಇತರ ಎಲ್ಲ ರೀತಿಯ ಪಟಾಕಿಯನ್ನು ನಿಷೇಧಿಸಿದೆ. ಸಂಬಂಧಿಸಿದ ಎಲ್ಲ ಇಲಾಖೆಗಳು ಮೇಲ್ವಿಚಾರಣೆ ನಡೆಸಬೇಕು ಎಂದು ತಿಳಿಸಿರುವ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಪತ್ರದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ಇಲ್ಲವೇ ದಂಡದ ಪ್ರಮಾಣ ಎಷ್ಟು ಎಂಬ ವಿವರ ನೀಡಿಲ್ಲ.
ಶಿಕ್ಷೆ ಬದಲು ಜಾಗೃತಿ:ಹಸಿರು ಪಟಾಕಿ ಬಳಸದವರು, ರಾತ್ರಿ 8 ರಿಂದ 10ರ ಸಮಯ ಹೊರತು ಪಡಿಸಿ ಇತರ ಸಂದರ್ಭದಲ್ಲಿ ಪಟಾಕಿ ಸಿಡಿಸುವವರ ವಿರುದ್ಧ ಸದ್ಯ ಯಾವುದೇ ಕ್ರಮದ ನಿರ್ಧಾರ ಕೈಗೊಂಡಿಲ್ಲ. ದಂಡ ಇಲ್ಲವೇ ಶಿಕ್ಷೆಯ ಪ್ರಮಾಣ ನಿಗದಿಪಡಿಸಿಲ್ಲ. ಈ ಬಾರಿ ಜನರಿಂದ ಸಿಗುವ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ. ಜನರಿಂದ ಸ್ಪಂಧನೆ ಸಿಕ್ಕರೆ, ವಾಯು ಹಾಗೂ ಶಬ್ಧ ಮಾಲಿನ್ಯ ಪ್ರಮಾಣ ತಗ್ಗಿದರೆ ಪರವಾಗಿಲ್ಲ.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರಲು ಯತ್ನಿಸುತ್ತೇವೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಪಟಾಕಿ ಸಿಡಿಸುವ ಆಸಕ್ತಿ ಜನರಲ್ಲಿ ಕಡಿಮೆ ಆಗಿದೆ. ಇನ್ನಷ್ಟು ಆದಾಗ ಮಾಲಿನ್ಯ ಪ್ರಮಾನ ಕಡಿಮೆ ಆಗಲಿದೆ. ನಾವು ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುತ್ತೇವೆ. ಅನಿವಾರ್ಯವಾದರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿ ಒಬ್ಬರು ಈಟಿವಿ ಭಾರತ್ ಗೆ ತಿಳಿಸಿದ್ದಾರೆ.
ಇದನ್ನು ಓದಿ:ಭಾರತದ ಪಟಾಕಿ ಕೇಂದ್ರ ಶಿವಕಾಶಿಗೆ ಡಬಲ್ ಹೊಡೆತ: ಶೇ.40ರಷ್ಟು ಉತ್ಪಾದನೆ ಕುಸಿತ