ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕಲ್ ಮೊಪೆಡ್ ದ್ವಿಚಕ್ರವಾಹನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿಯಲ್ಲಿ ಶನಿವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಅವರು ಮಾತನಾಡಿ, ಬಡವರ ಹೆಣ್ಣು ಮಕ್ಕಳ ಕಣ್ಣೀರಿಗೆ ಶಾಶ್ವತ ಪರಿಹಾರ ನೀಡಬೇಕಿದೆ. ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಭರವಸೆ ನೀಡಿದ ಅವರು, ಕೇಂದ್ರ ಸರ್ಕಾರದ ದುರಾಡಳಿತದಿಂದ ಸಿಲಿಂಡರ್ಗಳ ಬೆಲೆ ಗಗನಕ್ಕೇರಿದೆ.. ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು.
ನಾನು 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿ ಭಾಗವನ್ನು ಬಿಬಿಎಂಪಿಗೆ ಸೇರಿಸಿದ್ದೆ. ಹಾಗಾಗಿ ಈ ಭಾಗ ಈಗ ಅಭಿವೃದ್ಧಿ ಆಗುತ್ತಿದೆ. ನಿಮ್ಮ ಭವಿಷ್ಯಕ್ಕೆ ಸರ್ಕಾರದ ಆದಾಯ ಕಾರ್ಯಕ್ರಮ ನೀಡುತ್ತೇವೆ. ನಮಗೆ ಒಂದು ಬಾರಿ ಅಧಿಕಾರಕ್ಕೆ ಬರಲು ಅವಕಾಶ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
ಜವರಾಯಿಗೌಡರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಕಳೆದ ಎರಡು ಮೂರು ಬಾರಿ ನಿಂತು ಅತ್ಯಲ್ಪ ಮತದಿಂದ ಸೋತಿದ್ದಾರೆ. ನಮ್ಮ ಒತ್ತಾಯಕ್ಕೆ ಮತ್ತೊಮ್ಮೆ ನಿಂತಿದ್ದಾರೆ ಅವರನ್ನು ಗೆಲ್ಲಿಸಿಕೊಡುವಂತೆ ಕೋರಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಏಕಾಂಗಿಯಾಗಿ ಹೋರಾಟ ನನ್ನದು. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಭಿಪ್ರಾಯ ಸ್ಪಷ್ಟಪಡಿಸಿದರು.
ಮೇ 10 ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ.ಜವರಾಯಿಗೌಡರಿಗೆ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ. ನಿಮ್ಮ ಬಡತನ ಹೋಗಲಾಡಿಸುವ ಕಾರ್ಯಕ್ರಮ ನಾವು ನೀಡಲಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಏಳು ನಗರಸಭೆ, ಒಂದು ಪಟ್ಟಣ ಪಂಚಾಯಿತಿ ಬಿಬಿಎಂಪಿ ವ್ಯಾಪ್ತಿಗೆ ತಂದಿದ್ದೇನೆ. ಹಾಗಾಗಿ ಈಗ ಡಾಂಬರೀಕರಣ ಆಗಿದೆ ಎಂದರು. ಬೇರೆ ಪಕ್ಷಗಳ ಆಸೆ, ಆಮಿಷಕ್ಕೆ ಬಲಿಯಾಗಬೇಡಿ. ಅವರು ಕೊಡುತ್ತಿರುವ ಕುಕ್ಕರ್ ಬ್ಲಾಸ್ಟ್ ಆಗುತ್ತಿದೆ. ನಕಲಿ ಕುಕ್ಕರ್ ಹಾವಳಿಯಿಂದ ದೂರ ಇರುವಂತೆ ಹೆಚ್ಡಿಕೆ ಜನರಿಗೆ ಸಲಹೆ ನೀಡಿದರು.