ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ಜಾರಿ ಶತಸಿದ್ಧ: ಹಿಮಾಚಲ ಪ್ರದೇಶ ಸಿಎಂ - Himachal Pradesh CM Sukhwinder Singh Sukhu

ಬಿಜೆಪಿ ಈ ಹಿಂದೆ ಪೋಸ್ಟರ್, ಸಮಾವೇಶಗಳ ಮೂಲಕ ಚುನಾವಣೆ ಮಾಡುತ್ತಿತ್ತು. ಈಗ ಚುನಾವಣೆಗೆ ಆರು ತಿಂಗಳ ಮುಂಚಿತವಾಗಿ ಐಟಿ, ಇಡಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಆ ಮೂಲಕ ವಿರೋಧಿಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಆರೋಪಿಸಿದರು.

Himachal Pradesh CM Sukhwinder Singh Sukhu
ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು

By

Published : May 6, 2023, 6:51 AM IST

ಬೆಂಗಳೂರು:ನೀವು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ಈ ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಶತಸಿದ್ಧ ಎಂದು ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ನಾಯಕರು ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡದೇ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ರೈತರಿಗೆ ಬೆಂಬಲ ಬೆಲೆ ಸಿಗದಿರುವುದು ಪ್ರಮುಖ ಸಮಸ್ಯೆಯಾಗಿದೆ ಎಂದರು.

'ಈ ಸಮಸ್ಯೆಗಳ ಬಗ್ಗೆ ಬಿಜೆಪಿ ಚರ್ಚೆ ಮಾಡಲು ಸಿದ್ಧವಿಲ್ಲ. ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಸಂದರ್ಭದಲ್ಲಿ ನಾವು ನಮ್ಮ ಪ್ರಣಾಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಚುನಾವಣೆ ಮಾಡಿದೆವು. ರಾಹುಲ್ ಗಾಂಧಿ ಅವರು ನಮಗೆ ನೀವು ಅಧಿಕಾರಕ್ಕೆ ತಂದರೆ ಏನು ಮಾಡುತ್ತೀರಿ ಎಂದು ಕೇಳಿದರು. ಇದಕ್ಕಾಗಿ ನಾವು 10 ಗ್ಯಾರಂಟಿ ಯೋಜನೆಗಳನ್ನು ನೀಡಿದೆವು. ಅದರಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿ ಒಂದಾಗಿತ್ತು. ಈ ವಿಚಾರವಾಗಿ ಅನೇಕ ಟೀಕೆ ಟಿಪ್ಪಣಿ ಮಾಡಲಾಗಿತ್ತು. ಆದರೆ, ನಾವು ಇದನ್ನು ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಿದ್ದೇವೆ ಎಂದು ಸಿಎಂ ಸುಖ್ವಿಂದರ್ ಸಿಂಗ್ ತಿಳಿಸಿದರು.

ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಂಡು ಕೆಲಸ ಮಾಡುತ್ತದೆ. ನಿನ್ನೆಯಷ್ಟೇ ಶಿಮ್ಲಾ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ 3ನೇ 2ರಷ್ಟು ಬಹುಮತ ಪಡೆದಿದೆ. ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ನಮ್ಮದು ಕಡಿಮೆ ಜನಸಂಖ್ಯೆ ರಾಜ್ಯವಾದರೂ 97% ಜನರು ಹಿಂದೂಗಳು ಇದ್ದಾರೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ವಿಚಾರಧಾರೆ ಗೆದ್ದಿದ್ದು, ಬಿಜೆಪಿ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ನೀಡಲು ವಿಫಲವಾಗಿದ್ದು, ಸಮಾಜ ಒಡೆದು ಚುನಾವಣೆ ಗೆಲ್ಲಲು ಮುಂದಾಗಿತ್ತು. ಹೀಗಾಗಿ ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಸುಖ್ವಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಐಟಿ, ಇಡಿ ಅಸ್ತ್ರಗಳ ಪ್ರಯೋಗ: ಬಿಜೆಪಿ ಈ ಹಿಂದೆ ಪೋಸ್ಟರ್, ಸಮಾವೇಶಗಳ ಮೂಲಕ ಚುನಾವಣೆ ಮಾಡುತ್ತಿತ್ತು. ಈಗ ಚುನಾವಣೆಗೆ ಆರು ತಿಂಗಳ ಮುಂಚಿತವಾಗಿ ಐಟಿ, ಇಡಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಆ ಮೂಲಕ ವಿರೋಧಿಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ನಾನು ಕರ್ನಾಟಕ ರಾಜ್ಯಕ್ಕೆ ಬಂದು ನಮ್ಮ ರಾಜ್ಯದಲ್ಲಿ ಹೇಗೆ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಲು ಆಗಮಿಸಿದ್ದೇನೆ ಎಂದರು.

ಕರ್ನಾಟಕದಲ್ಲೂ ಈ ರಾಜ್ಯದ ಪ್ರಗತಿಗೆ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷ ಮಾತ್ರ ಸಮಾಜದ ಅಂತಿಮ ವ್ಯಕ್ತಿಯನ್ನು ತಲುಪಲು ಸಾಧ್ಯ. ಕಾಂಗ್ರೆಸ್ ಪಕ್ಷ ಕೇವಲ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು, ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ಯುವನಿಧಿ ಕಾರ್ಯಕ್ರಮದ ಮೂಲಕ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 2 ವರ್ಷದವರೆಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್​ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ವಿರುದ್ಧ ಪೃಥ್ವಿರಾಜ್ ಚವ್ಹಾಣ್ ವಾಗ್ದಾಳಿ:ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಭ್ರಷ್ಟಾಚಾರವನ್ನು ವ್ಯವಸ್ಥಿತಗೊಳಿಸಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್​ ಆರೋಪಿಸಿದರು. ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ‌ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದ ಅತ್ಯಂತ ಭ್ರಷ್ಟ ಸರ್ಕಾರಕ್ಕೆ ಕರ್ನಾಟಕ ಸಾಕ್ಷಿಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ 40 ಪರ್ಸೆಂಟ್ ಕಮಿಷನ್ ದಂಧೆ ನಡೆಯುತ್ತಿದೆ ಎಂದಾದರೆ ಭ್ರಷ್ಟಾಚಾರವನ್ನು ಬಿಜೆಪಿ ಸರ್ಕಾರ ವ್ಯವಸ್ಥಿತಗೊಳಿಸಿದೆ ಎಂದರ್ಥವಲ್ಲವೇ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಖರ್ಚು ಮಾಡಿದ ಹಣವನ್ನು ವಸೂಲಿ ಮಾಡುವ ಸಾಮರ್ಥ್ಯದ ಕಾರಣದಿಂದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಮುಖ್ಯಮಂತ್ರಿ ಹುದ್ದೆಯ ಮೌಲ್ಯ 2,500 ಕೋಟಿ ರೂ. ಎಂದು ಬಿಜೆಪಿ ಶಾಸಕರೇ ಹೇಳಿದ್ದಾರೆ. ಇಲ್ಲದಿದ್ದರೆ ಬೇರೆ ಯಾರನ್ನಾದರೂ ಮುಖ್ಯಮಂತ್ರಿ ಮಾಡಿರುತ್ತಿದ್ದರು ಎಂದು ಕಿಡಿಕಾರಿದರು.

ಇದನ್ನೂ ಓದಿ:ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತೀರ್ಮಾನ: ಡಿಕೆಶಿ

ABOUT THE AUTHOR

...view details