ಬೆಂಗಳೂರು :ನಗರದಲ್ಲಿ ರಾತ್ರಿಯಿಂದ ಕರ್ಫ್ಯೂ ಜಾರಿಯಾಗಲಿದೆ. ಜನತೆ ಸಹಕಾರ ನೀಡಬೇಕು. ನಿಯಮ ಮೀರಿದ್ರೆ ಪೊಲೀಸರು ಕ್ರಮಕೈಗೊಳ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನೈಟ್ ಕರ್ಫ್ಯೂ ಕುರಿತು ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು.. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸವರ್ಷ ಸಂಭ್ರಮದಿಂದ ಆಚರಿಸಬೇಕು. ಎಂಟು ರಾಜ್ಯದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ. ಕರ್ನಾಟಕದಲ್ಲೂ ಸೋಂಕು ಹೆಚ್ಚಿದೆ. ಹೀಗಾಗಿ, ನಿರ್ಬಂಧ ಹೇರಲಾಗಿದೆ. ಜನತೆ ಸಹಕಾರ ನೀಡಬೇಕು.
ಮನೆಯಲ್ಲಿ ಸಂಭ್ರಮ ಮಾಡಬಹುದು. ರಸ್ತೆಯಲ್ಲಿ ಮಾಡಲು ಅವಕಾಶ ಇಲ್ಲ. ನಿಯಮ ಮೀರಿದರೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಜನರು ಅದಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ನಿರ್ಬಂಧದಿಂದ ಹೋಟೆಲ್, ಪಬ್ ಮೇಲೆ ಹೊಡೆತ ಬೀಳಲಿದೆ. ಆದರೆ, ರೋಗ ಬರೋದನ್ನು ತಡೆಯಬೇಕು. ಕಳೆದ ಬಾರಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಳವಾಗಿತ್ತು. ಜನ ಸಹಕರಿಸಬೇಕು. ಆ ರೀತಿ ಮತ್ತೆ ಆಗೋದು ಬೇಡ ಎಂದು ನಿರ್ಬಂಧ ಹೇರಲಾಗುತ್ತಿದೆ ಎಂದು ತಿಳಿಸಿದರು.
ಉಡುಪಿ ಕೊರಗ ಕುಟುಂಬದ ಮೇಲೆ ಪೊಲೀಸರ ಹಲ್ಲೆ ಪ್ರಕರಣವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ತನಿಖೆ ಆಗುತ್ತಿದೆ. ಈಗಾಗಲೇ ಹಲ್ಲೆ ಮಾಡಿದವರನ್ನ ಸಸ್ಪೆಂಡ್ ಮಾಡಲಾಗಿದೆ.
ಸಾಮೂಹಿಕವಾಗಿ ಬೇರೆಡೆ ವರ್ಗಾವಣೆ ಮಾಡಲಾಗಿದೆ. ನಮ್ಮ ಪೊಲೀಸರು ಅತಿರೇಕ ಮಾಡಿದ್ದಾರೆ. ಅದರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಸ್ವತಃ ಎಸ್ಪಿ ಅವರೇ ಹೋಗಿ ಹೇಳಿದ್ದಾರೆ. ಕುಟುಂಬದ ಮೇಲೆ ಯಾವುದೇ ಎಫ್ಐಆರ್ ಹಾಕೋದಿಲ್ಲ ಎಂದರು.
ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಆರು ವರ್ಷ ಏನೂ ಮಾಡಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ಒಂದು ಡಿಪಿಆರ್ ಕೂಡ ಮಾಡಲಿಲ್ಲ. ಅಂತವರು ಈಗ ಗಿಮಿಕ್ ಮಾಡಲು ಪಾದಯಾತ್ರೆ ಹೊರಟಿದ್ದಾರೆ. ಇದರಿಂದ ನಾವು ಗೆಲ್ಲಬಹುದು ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆಯಲ್ಲಿ ಫೇಲ್.. ಆತ್ಮಹತ್ಯೆಗೆ ಶರಣಾದ ಮೆಡಿಕಲ್ ವಿದ್ಯಾರ್ಥಿನಿ