ಬೆಂಗಳೂರು: ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡದೇ, ಬಾಯಿ ಮುಚ್ಚಿಕೊಂಡು ಕೂತರೆ ನಾವು ಶಾಂತಿಯಿಂದ ಬದುಕಲು ಆಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಟಿ ಬೀಸಿದ್ದಾರೆ
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳ ಗಡಿ ವಿಚಾರ ಮುಗಿದ ಅಧ್ಯಾಯ. ಗಡಿ ವಿವಾದವನ್ನು ಮತ್ತೆ ಮತ್ತೆ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಂಡು, ಸಮಾಜದಲ್ಲಿ ಅಶಾಂತಿ ಸೃಷ್ಟಿಸಬಹುದು. ಈ ವಿಚಾರದಿಂದ ಭಾಷೆ, ಜನರು ಹಾಗೂ ರಾಜ್ಯಗಳ ನಡುವೆ ಗೊಂದಲ ಸೃಷ್ಟಿ ಮಾಡಬಹುದೇ ಹೊರತು ಇದರಿಂದ ಯಾವುದೇ ಲಾಭ ಇಲ್ಲ.
ಕನ್ನಡಿಗರು ಹಾಗೂ ಮರಾಠಿಗರು ಗಡಿ ಭಾಗದಲ್ಲಿ ಒಟ್ಟಾಗಿ ಬದುಕುತ್ತಿದ್ದೇವೆ. ಯಾವುದೇ ಭಾಷಿಗರನ್ನು ಕರ್ನಾಟಕ ಸ್ವಾಗತ ಮಾಡಿದೆ. ನಮ್ಮ ನಡುವೆ ಹೊಡೆದಾಡಿಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.
ಮಂಗಳೂರು ಕುಕ್ಕರ್ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಕರಾವಳಿ ಹಾಗೂ ದೇಶವನ್ನು ಬೆಚ್ಚಿ ಬೀಳಿಸುವ ಘಟನೆ. ವರ್ಷದ ಹಿಂದೆ ಗೋಡೆ ಬರಹ ಬರೆದಿದ್ದಾತನೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಕದ್ರಿ ದೇವಸ್ಥಾನ ಸ್ಫೋಟ ಮಾಡಲು ತೆಗೆದುಕೊಂಡು ಹೋಗಿದ್ದಾನೆ. ಮಂಗಳೂರು ಸುತ್ತಮುತ್ತದ ಹಲವು ದೇವಸ್ಥಾನಗಳ ಮ್ಯಾಪ್ ಅವನ ಕೈಯಲ್ಲಿ ಸಿಕ್ಕಿದೆ.