ಬೆಂಗಳೂರು: ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅನುಕೂಲಕರವಾದ ತೀರ್ಪು ಪಡೆದುಕೊಳ್ಳುವುದಾಗಿ ಹೇಳಿ ಲಕ್ಷಾಂತರ ಶುಲ್ಕ ಸ್ವೀಕರಿಸಿ ನಂತರ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿಯ ವೃದ್ಧರಾದ ಸಿಪ್ರಿಯನ್ ಮೆನೆಜಸ್ ಎಂಬುವರು ತಮ್ಮ ವಿರುದ್ಧ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಹಿರಿಯ ವಕೀಲ ಕೆ.ಎಸ್. ಮಹದೇವನ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಕಕ್ಷಿದಾರ ಪ್ರಕರಣದಲ್ಲಿ ಯಶಸ್ಸು ಸಿಕ್ಕಿಲ್ಲ, ಅನುಕೂಲಕರವಾದ ತೀರ್ಪು ಪಡೆಯಲಾಗಲಿಲ್ಲ ಎಂಬ ಕಾರಣಕ್ಕೆ ವಕೀಲರು ನಂಬಿಕೆ ದ್ರೋಹ ಅಥವಾ ವಂಚನೆ ಎಸಗಿದ್ದಾರೆ ಎಂದು ಹೇಳುವುದು ವಿನಾಶಕಾರಿ ಸನ್ನಿವೇಶಕ್ಕೆ ದಾರಿ ಮಾಡಿಕೊಡುತ್ತದೆ. ವಕೀಲರು ವಿಚಾರಣೆಗೆ ಹಾಜರಾಗಿ, ಪ್ರಕರಣದಲ್ಲಿ ಯಶಸ್ವಿಯಾಗಲು ತಮ್ಮೆಲ್ಲಾ ಪ್ರಯತ್ನ ನಡೆಸಬಹುದಷ್ಟೇ. ಪ್ರಕರಣ ಕೇವಲ ಅದರ ಅರ್ಹತೆ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲ ಕಕ್ಷಿದಾರರು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ನ್ಯಾಯಾಲಯಗಳಲ್ಲಿ ಅನುಕೂಲಕರ ಆದೇಶ ಪಡೆಯುವುದಾಗಿ ಯಾವುದೇ ವಕೀಲ ಹೇಳಲು ಸಾಧ್ಯವಿಲ್ಲ. ಶುಲ್ಕ ಪಾವತಿಸಲಾಗಿದೆ ಎಂಬ ಕಾರಣಕ್ಕೆ ವಕೀಲರು ಖಂಡಿತವಾಗಿಯೂ ಅನುಕೂಲಕರ ತೀರ್ಪು ಪಡೆಯುತ್ತಾರೆ ಎಂದು ನಂಬಬಾರದು. ಯಾವುದೇ ಪ್ರಕರಣದಲ್ಲಿ ಒಬ್ಬರು ಮಾತ್ರ ಗೆಲ್ಲುತ್ತಾರೆ. ಯಾವುದೇ ಪ್ರಕರಣ ಅರ್ಹತೆ, ವಾಸ್ತವಾಂಶ ಮತ್ತು ಕಾನೂನು ಅನ್ವಯದ ಮೇಲೆ ಅಂತಿಮ ತೀರ್ಮಾನ ಹೊರಬರುತ್ತದೆ.