ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಅಂದಿಗೂ ಇಂದಿಗೂ ಮೊದಲ ಸ್ಥಾನದಲ್ಲೇ ಇದೆ.
ದಿನೇ ದಿನೆ ಸೋಂಕಿತರ ಸಂಖ್ಯೆ ಕಡಿಮೆ ಆಗ್ತಿದೆ ಎನ್ನುವಾಗಲೇ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಬೆಂಗಳೂರಿನಲ್ಲಿ ಪ್ರಕರಣ ಹೆಚ್ಚಾಗಲು ಎರಡು ಕ್ಲಸ್ಟರ್ ಗಳೇ ಮುಖ್ಯ ಕಾರಣವಾಗಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ ರವಿ ಅಭಿಪ್ರಾಯಪಟ್ಟಿದ್ದಾರೆ.
ಮಂಜು ಶ್ರೀ ಕಾಲೇಜು ಮತ್ತು ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ ಪ್ರಕರಣದಿಂದ ಸೋಂಕಿತರ ಸಂಖ್ಯೆ ಹೆಚ್ಚಿದೆ. ಬೇರೆ ಯಾವುದೇ ಕಾರಣದಿಂದ ಪ್ರಕರಣ ಸಂಖ್ಯೆ ಹೆಚ್ಚಾಗಿಲ್ಲ ಅಂತ ತಿಳಿಸಿದ್ದಾರೆ.
ಐದಾರು ಕ್ಲಸ್ಟರ್ ಕಾಣಿಸಿಕೊಂಡರೆ ಎರಡನೇ ಅಲೆಯು ಶುರುವಾಗಬಹುದು:
ಬೆಂಗಳೂರು ಸೇರಿದಂತೆ ಇತರೆಡೆ ಕೊರೊನಾ ಎರಡನೇ ಅಲೆ ಶುರುವಾಗಬಹುದು. ಇನ್ನೊಂದು ಐದಾರು ಕ್ಲಸ್ಟರ್ ಕಾಣಿಸಿಕೊಂಡರೆ ಕೊರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚಾಗಬಹುದು. ಈಗಾಗಲೇ ರಾಜ್ಯದಲ್ಲಿ ಮೂರು ಕ್ಲಸ್ಟರ್ ಕಂಡು ಬಂದಿದೆ. ಕಾವಲ್ ಬೈರಸಂದ್ರದ ಮಂಜುಶ್ರೀ ನರ್ಸಿಂಗ್ ಕಾಲೇಜು, ಬೊಮ್ಮನಹಳ್ಳಿ ಅಪಾರ್ಟ್ಮೆಂಟ್, ಮಂಗಳೂರಿನ ಉಳ್ಲಾಲದ ಆಲಿಯಾ ನರ್ಸಿಂಗ್ ಕಾಲೇಜಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಜೊತೆಗೆ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಅತೀ ಹೆಚ್ಚಾಗಿ ಸೋಂಕು ಹರಡುತ್ತಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಕೊರೊನಾ ಭೀತಿ ಇದ್ದೇ ಇದೆ.
ಈಗಾಗಲೇ ತಾಂತ್ರಿಕ ಸಮಿತಿಯಿಂದಲೂ ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಈಗಾಗಲೇ ಕೊರೊನಾ ಸಮುದಾಯದಲ್ಲಿ ಹರಡಿದ್ದು, ಎಲ್ಲ ಪಾಸಿಟಿವ್ ರೋಗಿಗಳ 20 ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಟೆಸ್ಟ್ ಮಾಡಬೇಕು ಅಂತ ಹೇಳಿದ್ದಾರೆ. ಜನರಲ್ಲಿ ಸ್ವಲ್ಪ ಜವಾಬ್ದಾರಿ ಇರಬೇಕು, ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಭೆ- ಸಮಾರಂಭಗಳಲ್ಲಿ ಹೆಚ್ಚು ಜನರು ಸೇರದಂತೆ ಸಚಿವರಿಗೂ ಹೇಳಿದ್ದೇವೆ. ಸಚಿವ ಸುಧಾಕರ್ ಅವರು ಸಹ ಸಿಎಂ ಯಡಿಯೂರಪ್ಪ ಅವರ ಬಳಿ ಮಾತಾನಾಡುವುದಾಗಿ ಹೇಳಿದ್ದಾರೆ. ಈ ವಾರದಲ್ಲಿ ಇದಕ್ಕೆ ಕ್ರಮ ಕೈಗೊಳ್ಳಲಾಗುತ್ತೆ ಅಂತ ಡಾ ರವಿ ತಿಳಿಸಿದರು.
ಬೆಂಗಳೂರು ಕೇಸ್ ಡಿಟೈಲ್ಸ್