ಬೆಂಗಳೂರು: ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡುತ್ತೇನೆ. ನಾನು ಆಯ್ಕೆಯಾದರೆ ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಸಂವಿಧಾನವು ನೀಡುವ ಇತರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು (ಸಮಂಜಸವಾದ ನಿರ್ಬಂಧಗಳೊಂದಿಗೆ) ನಾಗರಿಕರ ಅವರ ಧರ್ಮ ಅಥವಾ ಸಿದ್ಧಾಂತವನ್ನು ಲೆಕ್ಕಿಸದೆ ರಕ್ಷಿಸುತ್ತೇನೆ ಎಂದು ಪ್ರತಿಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಭರವಸೆ ನೀಡಿದ್ದಾರೆ.
ದೇಶದ್ರೋಹದ ಕಾನೂನನ್ನು ರದ್ದುಗೊಳಿಸಲು ನಾನು ಆದ್ಯತೆ ನೀಡುತ್ತೇನೆ. ದೇಶದಲ್ಲಿ ಕೋಮುವಾದ ಬಲಗೊಳ್ಳುತ್ತಿದೆ. ಇದಕ್ಕೆ ವಿರುದ್ಧವಾಗಿ ಧ್ವನಿ ಎತ್ತುವವರನ್ನು ನಾನು ಬೆಂಬಲಿಸುತ್ತೇನೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನ ಮೇಲೆ ನಡೆಯುವ ಆಪರೇಷನ್ ಕಮಲಕ್ಕೆ ತಡೆ ಹಾಕಲು ಹಿಂಜರಿಯುವುದಿಲ್ಲ. ಈ ದೇಶಕ್ಕೆ ನಿಷ್ಪಕ್ಷಪಾತವಾಗಿ ಸಂವಿಧಾನವನ್ನು ಪಾಲಿಸುವ ರಾಷ್ಟ್ರಪತಿಯ ಅಗತ್ಯವಿದೆ ಎಂಬುದನ್ನು ವಿವರಿಸಲು ಇಚ್ಛಿಸುತ್ತೇನೆ ಎಂದರು.
ಸಂವಿಧಾನಕ್ಕೆ ಮಾತ್ರ ಬದ್ಧನಾಗಿರುತ್ತೇನೆ: ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಸಂವಿಧಾನಕ್ಕೆ ಮಾತ್ರ ಬದ್ಧವಾಗಿ ಇರುತ್ತೇನೆ. ಕಾರ್ಯಾಂಗ ತನ್ನ ವ್ಯಾಪ್ತಿಯನ್ನು ಉಲ್ಲಂಘಿಸಿದ ಸಂದರ್ಭ ಯಾವುದೇ ಪರ ಇಲ್ಲವೇ ಭಯದಿಂದ ಒಬ್ಬರನ್ನು ಬೆಂಬಲಿಸುವ ಕಾರ್ಯ ಮಾಡುವುದಿಲ್ಲ. ಕರ್ನಾಟಕದಲ್ಲಿ, ಸರ್ಕಾರವು ಆಡಳಿತ ಪಕ್ಷದ ಸೈದ್ಧಾಂತಿಕ ಕಾರ್ಯಸೂಚಿಯಿಂದ ಹೊಸ ಶಾಲಾ ಪಠ್ಯಕ್ರಮವನ್ನು ಪರಿಚಯಿಸುವ ಮೂಲಕ ಯುವ ಪೀಳಿಗೆಯ ಮನಸ್ಸನ್ನು ಕೋಮುವಾದದ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಆಡಳಿತ ಪಕ್ಷದ ಅಭ್ಯರ್ಥಿ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಅವರು ಹೇಳಿದರು.