ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ವಿರುದ್ಧ ಕೇಳಿಬಂದಿದ್ದ ಗಂಭೀರ ಆರೋಪಕ್ಕೆ ಇಂದು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ಎಸ್ಸಿ ಮೀಸಲಾತಿ ಒಳಗೆ ಒಂದೇ ಒಂದು ಸವಲತ್ತು ಪಡೆದಿದ್ದರೂ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು ಈ ಮೂಲಕ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ನಾನು ಎಂದಿಗೂ ಸಮಾಜಕ್ಕೆ ದ್ರೋಹ ಬಗೆಯಲ್ಲ. ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ನಾನು ಜಾತ್ಯತೀತ ವ್ಯಕ್ತಿ, ಸಂವಿಧಾನದ ಬಗ್ಗೆ ಗೌರವವಿದೆ. ಸಂವಿಧಾನ ಪಾಲಿಸುವ ವ್ಯಕ್ತಿ. ನಾನು ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ. ನಿನ್ನೆ ನಾನು ಸದನದಲ್ಲಿ ಇರಲಿಲ್ಲ, ನಮ್ಮ ಸ್ನೇಹಿತ ಗೂಳಿಹಟ್ಟಿ ಶೇಖರ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಯಾವುದೇ ಬೇರೆ ಧರ್ಮದ ಸಭೆಯಲ್ಲಿ ಭಾಗವಹಿಸಿಲ್ಲ, ಬೆಂಬಲ ಕೊಟ್ಟಿಲ್ಲ ಎಂದು ಹೇಳಿದರು.