ಶಾಸಕ ಮುನಿರತ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರು: "ನನಗೆ ಕಾಂಗ್ರೆಸ್ಸಿನ ಅವಶ್ಯಕತೆ ಇಲ್ಲ, ನಾನು ಬಿಜೆಪಿಯಲ್ಲೇ ಇರುತ್ತೇನೆ. ಒಂದು ವೇಳೆ ರಾಜಕೀಯ ಬೇಡವೆನಿಸಿದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆಯೇ ಹೊರತು, ಕಾಂಗ್ರೆಸ್ ಪಕ್ಷವನ್ನು ಮಾತ್ರ ಸೇರಲ್ಲ. ಕಾಂಗ್ರೆಸ್ ಬಾಗಿಲು ತಟ್ಟುವ ಕೆಲಸವನ್ನೂ ಮಾಡುವುದಿಲ್ಲ" ಎಂದು ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸ್ಪಷ್ಟಪಡಿಸಿದರು.
ವೈಯಾಲಿಕಾವಲ್ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಜೊತೆ ಬಿಜೆಪಿಗೆ ಬಂದವರಲ್ಲಿ ಯಾರೇ ಪಕ್ಷ ತೊರೆಯಲು ಮುಂದಾದರೂ ನಾನು ಯಾರ ಮನವೊಲಿಕೆ ಮಾಡುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರವರ ಸ್ವಂತ ನಿರ್ಧಾರ, ಹೋಗುವವರಿಗೆ ನಾನೇಕೆ ಬೇಡ ಎನ್ನಲಿ, ಇಲ್ಲಿಂದ ಹೋಗಿ ಒಳ್ಳೆಯದಾದರೆ ಅದಕ್ಕೆ ನಾನೇಕೆ ಬೇಡವೆನ್ನಲಿ, ಹೋಗುವವರಿಗೆ ಒಳ್ಳೆಯದಾಗಲಿ" ಎಂದು ಹೇಳಿದರು.
'ಬಿಜೆಪಿಯಲ್ಲಿ ಮೊದಲ ಬೆಂಚ್ನಲ್ಲಿ ಇದ್ದೇನೆ': "ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದರೆ ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ. ಲಾಸ್ಟ್ ಬೆಂಚ್‌ನಿಂದ ಮೊದಲ ಬೆಂಚಿಗೆ ಬರಲು ಇನ್ನೂ 20 ವರ್ಷ ಬೇಕು. ಈಗಾಗಲೇ 65 ವರ್ಷ ಆಗಿದೆ. ಇನ್ನು 20 ವರ್ಷ ಅಂದ್ರೆ 85 ವರ್ಷ ಆಗಲಿದೆ. ಈಗ ಬಿಜೆಪಿಯಲ್ಲಿ ಮೊದಲ ಬೆಂಚ್ನಲ್ಲಿ ಇದ್ದೇನೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನನ್ನೊಂದಿಗೆ ಬಂದಿರುವ ಎಲ್ಲರೂ ಬಿಜೆಪಿ ಪಕ್ಷದಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಮತ್ತೆ ಕಾಂಗ್ರೆಸ್‌ಗೆ ಹೋದರೆ ಕಡೆಯ ಸಾಲಿನಲ್ಲಿ ಕೂರಬೇಕು. ನಾನಂತೂ ಅಂತ ಕೆಲಸ ಮಾಡಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
"17 ಶಾಸಕರಲ್ಲಿ 16 ಜನ ಕಾಂಗ್ರೆಸ್‌ಗೆ ಹೋಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಾನಂತೂ ಹೋಗುವುದಿಲ್ಲ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿದ್ದರಾಮಯ್ಯ, ಪರಮೇಶ್ವರ್ ಸೇರಿ ವೈಯಕ್ತಿಕವಾಗಿ ಯಾರ ಜೊತೆಯಲ್ಲಿಯೂ ನನಗೆ ಯಾವುದೇ ದ್ವೇಷ ಇಲ್ಲ. ರಾಜಕೀಯವಾಗಿ ಅವರ ಶಕ್ತಿಮೀರಿ ನನ್ನನ್ನು ಸೋಲಿಸಲು ಪ್ರಯತ್ನಪಟ್ಟಿದ್ದಾರೆ. ತಾಯಿ ರಾಜರಾಜೇಶ್ವರಿ ಆಶೀರ್ವಾದ ಹಾಗೂ ಮತದಾರರ ಮತ ಭಿಕ್ಷೆಯಿಂದ ನಾನು ಶಾಸಕನಾಗಿದ್ದೇನೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಅಧಿಕಾರಕ್ಕೋಸ್ಕರ ಕಾಂಗ್ರೆಸ್‌ಗೆ ಹೋಗುವ ಕೆಲಸ ನಾನು ಮಾಡುವುದಿಲ್ಲ. ವಿರೋಧ ಪಕ್ಷದಲ್ಲಿ ನಾನು ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು.
ಡಿಕೆಶಿ ಅವರಾಗಲಿ, ಸಿದ್ದರಾಮಯ್ಯ ಆಗಲಿ ಇಡೀ ಅವರ ಸಚಿವ ಸಂಪುಟವೇ ಆಗಲಿ ನನಗೆ ತೊಂದರೆ ಕೊಡಬೇಕು ಎಂದು ಅನ್ನಿಸಿದರೆ ನನ್ನನ್ನು ಜೈಲಿನಲ್ಲಿಟ್ಟು ನನ್ನ ಕ್ಷೇತ್ರದ ಅಭಿವೃದ್ಧಿ ಮಾಡಿಕೊಟ್ಟರೆ ಸಾಕು. ಒಂದು ವೇಳೆ ರಾಜೀನಾಮೆ ಕೊಟ್ಟರೆ ನಾವು ಕ್ಷೇತ್ರದ ಕೆಲಸ ಮಾಡುತ್ತೇವೆ ಅಂದರೆ ಅದಕ್ಕೂ ಸಿದ್ಧನಿದ್ದೇನೆ. ಆದರೆ ಕಾಂಗ್ರೆಸ್ ಸೇರುವುದಿಲ್ಲ ಎಂದರು.
14 ಅಧಿಕಾರಿಗಳು ಅಮಾನತು ವಿಚಾರ:ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನನಂತೂ ಟಾರ್ಗೆಟ್ ಮಾಡಿದ್ದಾರೆ. ಇದು ಸ್ಪಷ್ಟವಾಗಿ ಕಾಣುತ್ತಿದೆ. ಡಿ.ಕೆ.ಶಿವಕುಮಾರ್ ಯಾವಾಗ ಅಧಿಕಾರ ವಹಿಸಿಕೊಂಡರೋ ಅಂದಿನಿಂದ ಇದು ಸಾಬೀತಾಗಿದೆ. ಆರ್.ಆರ್.ನಗರದ 14 ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. 40 ವರ್ಷದ ಸ್ನೇಹ ನನಗೆ ಡಿಕೆಶಿ ನಡುವೆ ಇದೆ. ಹಾಗಾಗಿ ನನ್ನ ಮೇಲೆ ಅಭಿಮಾನ ಜಾಸ್ತಿ, ಅದಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ. ಆರ್.ಆರ್.ನಗರದ ಜನರಿಗೆ 24 ಗಂಟೆ ನನ್ನ ಬಾಗಿಲು ತೆರೆದಿರುತ್ತದೆ. ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಡಿಕೆಶಿ ಹೇಳಿದ್ದಾರೆ. ರಾಜ್ಯದ ಎಲ್ಲಾ 224 ಕ್ಷೇತ್ರಕ್ಕೂ ಅವರು ಸಚಿವರು. ಆದರೆ ಆರ್.ಆರ್.ನಗರಕ್ಕೆ ಮಾತ್ರ ಅವರ ಮನೆ ಬಾಗಿಲು ತೆರೆದಿರಲಿದೆ. ಇನ್ನೂ 223 ಕ್ಷೇತ್ರಗಳಿಗೆ ಬಾಗಿಲು ಬಂದಾಗಿರಲಿದೆ ಎಂದು ಟೀಕಿಸಿದರು.
ಕಾಮಗಾರಿ ಪರಿಶೀಲನೆ ಮಾಡುವವರಿಗೆ ಎಚ್ಚರಿಕೆ: ತನಿಖೆ ಬೆಂಗಳೂರು ನಗರದ ಎಲ್ಲ ಕ್ಷೇತ್ರಕ್ಕೂ ಒಂದೇ ಆಗಿರಬೇಕು. ಆರ್.ಆರ್.ನಗರದಲ್ಲಿ ಮುನಿರತ್ನಗೆ ಏನು ತೊಂದರೆ ಕೊಡುತ್ತಾರೋ ಅದು ಇನ್ನುಳಿದ 27 ಕ್ಷೇತ್ರಕ್ಕೂ ಅನ್ವಯಿಸಲಿದೆ. ಇಲ್ಲಿ ಒಂದಕ್ಕೆ ತೊಂದರೆ ಕೊಟ್ಟರೆ ಆ 27 ಕ್ಷೇತ್ರಕ್ಕೂ ಮರು ತನಿಖೆ ಆಗಬಹುದು. ಅಧಿಕಾರಿಗಳು ನನ್ನ ಕ್ಷೇತ್ರದ ವಿಚಾರದಲ್ಲಿ ತಿರುಚಿ ಬರೆದರೆ ಮುಂದಿನ ದಿನಗಳಲ್ಲಿ ಆ ದಾಖಲೆಗಳು ದೊಡ್ಡ ಸಂಸ್ಥೆ ಹೋಗಿ ಸೇರಲಿವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಇಂದು ಇಲ್ಲಿನ ಅಧಿಕಾರಿಗಳು ತಿರುಚಿ ಬರೆದರೆ ಮುಂದಿನ ದಿನಗಳಲ್ಲಿ ಅವೇ ದಾಖಲೆ ಮೇಲ್ಗಡೆ ಹೋಗಲಿದೆ. ಇನ್ನೂ ದೊಡ್ಡ ಸಂಸ್ಥೆಗೆ ಹೋಗಲಿದೆ, ತನಿಖೆ ಮಾಡುವ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ತನಿಖೆ ಮಾಡಬೇಕು ಎಂದರು.
ಕೆಂಪಣ್ಣ ವಿರುದ್ಧ ಹರಿಹಾಯ್ದ ಮುನಿರತ್ನ:ಕೆಲಸ ಮಾಡುವ ವ್ಯಕ್ತಿ ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಬೇಕು. ಗುತ್ತಿಗೆದಾರರು ಯಾಕೆ ಸಚಿವರ ವಿರುದ್ಧದ ಕಮೀಷನ್ ಆರೋಪ ವಾಪಸ್ ಪಡೆದರು ಎಂದು ಅವರನ್ನೇ ಕೇಳಬೇಕು. ಕರ್ನಾಟಕ ರಾಜ್ಯದ ಗುತ್ತಿಗೆದಾರರ ಸಂಘದಲ್ಲಿ ಉದ್ದಗಲ ಗುಣಮಟ್ಟ ಎಲ್ಲವೂ ಗೊತ್ತಿರುವ ಗುತ್ತಿಗೆದಾರ ಅಧ್ಯಕ್ಷ ಆಗಿದ್ದರೆ, ಈ ಸಮಸ್ಯೆ ಆಗುತ್ತಿರಲಿಲ್ಲ. ಕೆಲಸ ಗೊತ್ತಿರುವ ಕೆಲಸಗಾರ ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಬೇಕು ಅವರಿಗೆ ಕೆಲಸ ಗೊತ್ತಿರಲಿದೆ ಆದರೆ ಕೆಲಸವೇ ಮಾಡದ ವ್ಯಕ್ತಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತರೆ ಗುತ್ತಿಗೆದಾರರ ಕಷ್ಟ ಯಾರಿಗೆ ಗೊತ್ತಾಗಬೇಕು. ಗುತ್ತಿಗೆದಾರರ ಸಮಸ್ಯೆ ಯಾರು ತೀರಿಸಬೇಕು ಎಂದು ಕೆಂಪಣ್ಣ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಶಾಸಕರಿಗೆ ಅನುದಾನದ ಅಗತ್ಯವಿಲ್ಲ. ಇಲ್ಲಿ ಅವರದ್ದೇ ಸರ್ಕಾರವಿದೆ. ವರ್ಗಾವಣೆ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಾರೆ. ಅಭಿವೃದ್ಧಿ ಕೆಲಸ ಬೇಕಾಗಿಲ್ಲ. ಅನುದಾನವು ಬೇಕಿಲ್ಲ. ಅವರು ಬರೀ ವರ್ಗಾವಣೆ ಮಾಡಿಕೊಂಡು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೆ ಯಾವುದಾದರೂ ಒಬ್ಬ ಶಾಸಕ ಅನುದಾನ ಕೇಳಬೇಕಿತ್ತು. ಅಭಿವೃದ್ಧಿಗೆ ಹಣ ಕೊಡಿ ಎಂದು ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ನಮಗೆ ಅನುದಾನ ಕೊಡದೇ ಇದ್ದರೂ ಪರವಾಗಿಲ್ಲ. ಅವರ ಕಡೆಯವರಿಗಾದರೂ ಕೊಡಿ ಬಿಜೆಪಿಯವರಿಗೆ ಕೊಡದಿದ್ದರೂ ಪರವಾಗಿಲ್ಲ ಕಾಂಗ್ರೆಸ್ನವರಿಗೆ ಅನುದಾನ ಕೊಡಲಿ. ಆದರೆ ಅದನ್ನೂ ಮಾಡುತ್ತಿಲ್ಲವಲ್ಲ ಎಂದರು.
ಬೆಂಗಳೂರಿನ ಬಿಬಿಎಂಪಿಯಿಂದ 670 ಕೋಟಿ ಹೊರತುಪಡಿಸಿ ಇನ್ನೂ ಒಂದುವರೆ ಸಾವಿರ ಕೋಟಿ ಹಣ ಬಿಡುಗಡೆಯಾಗಬೇಕಿತ್ತು. ಬಿಬಿಎಂಪಿಯಲ್ಲಿ ಪ್ರಸ್ತುತ 3000 ಕೋಟಿ ಅನುದಾನ ಇದೆ. ಗುತ್ತಿಗೆದಾರರಿಗೆ ಅನುದಾನ ಕೊಡಬಹುದು. ತೆರಿಗೆ ಸಂಗ್ರಹವೇ 2,000 ಕೋಟಿ ಇದೆ ಆದರೂ ಕೊಡುತ್ತಿಲ್ಲ. ಇದರಿಂದ ಇಡಿ ಬೆಂಗಳೂರಿನ ಎಲ್ಲ ಕಾಮಗಾರಿಗಳು ಇಂದು ಸ್ಥಗಿತವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂಓದಿ:ಭ್ರಷ್ಟಾಚಾರ ಆರೋಪ ಮಾಡಿ ಪ್ರಚಾರದಲ್ಲಿರಲು ಬಯಸಿದರೆ ಏನು ಮಾಡೋಕಾಗುತ್ತೆ: ಸಂಸದ ಡಿ.ಕೆ.ಸುರೇಶ್