ಬೆಂಗಳೂರು: ನಾವು 'ಘರ್ ವಾಪ್ಸಿ' ಅಂತ ಮಾಡೋಕೆ ಹೋದರೆ, ಅರ್ಧ ಬಿಜೆಪಿ, ಅರ್ಧ ಜೆಡಿಎಸ್ ಖಾಲಿಯಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿದರೆ ಯಾರಿಗಾದರೂ ಸ್ವಾಗತ. ಕಂಡೀಷನ್ ಇಲ್ಲದೆ ಯಾರು ಬಂದ್ರೂ ಸ್ವಾಗತ. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ. ಬಿಜೆಪಿ, ಜೆಡಿಎಸ್ ಒಡೆಯಲು ಹೋಗ್ತಿಲ್ಲ. ಯಾರ ಅಸ್ತಿತ್ವ ಏನು ಅನ್ನೋದನ್ನು ಜನರೇ ತೋರಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅವರ ಅಸ್ತಿತ್ವ ಕಾಪಾಡಿಕೊಳ್ಳಲಿ. ಸಚಿವ ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಬಹಿರಂಗ ಪಡಿಸಿದರು.
ಅಲ್ಲಿ ಕ್ಯಾಪ್ಟನ್ ಆಗಲು ಯಾರೂ ಸಿದ್ಧರಿಲ್ಲ : ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಯಡಿಯೂರಪ್ಪ ಅವರನ್ನು ಹೇಗೆ ನಡೆಸಿಕೊಂಡ್ರು ಅಂತ ಗೊತ್ತಿದೆ. ಈಗ ಅಲ್ಲಿ ಕ್ಯಾಪ್ಟನ್ ಆಗೋಕೆ ಯಾರೂ ಕೂಡ ರೆಡಿ ಇಲ್ಲ. ಪ್ರಸ್ತುತ ಅಲ್ಲಿ ಕ್ಯಾಪ್ಟನ್ ಕೂಡ ಇಲ್ಲ. ಯಡಿಯೂರಪ್ಪ ಅವರ ಮಾತು ಈಗ ಬಿಜೆಪಿ ಪಾಳಯದಲ್ಲಿ ನಡೆಯುತ್ತಾ? ಎಂದು ಪ್ರಶ್ನಿಸಿದರು.
ನಡೆದಿದ್ರೆ ಇಷ್ಟು ಜನ ಬಿಜೆಪಿ ಬಿಟ್ಟು ಬರ್ತಾ ಇದ್ರಾ? ಚುನಾವಣೆ ವೇಳೆ ಹೆಗಲ ಮೇಲೆ ಕೈಹಾಕಿ ಮಾತನಾಡಿದ್ರು. ಯಡಿಯೂರಪ್ಪ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡಿದ್ರು. ಬಿ ಎಸ್ ವೈ ಹೇಳಿದ ಎಷ್ಟು ಜನರಿಗೆ ಟಿಕೆಟ್ ಕೊಟ್ರು. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಇಳಿಸಿದ್ರು. ಬಿಜೆಪಿ ಈಗ ಮುಳುಗುತ್ತಿರುವ ಹಡಗು ಎಂದು ವಾಗ್ದಾಳಿ ನಡೆಸಿದರು.