ಬೆಂಗಳೂರು:ಸಂಚಾರಿ ನಿಯಮ ಪಾಲನೆ ಮಾಡುವವರಿಗೆ ಸಂಚಾರ ಪೊಲೀಸರು ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ. ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುವ ಸವಾರರಿಗೆ ವಾಹನ ವಿಮೆ ತಗ್ಗಿಸಲು ಇನ್ಶೂರೆನ್ಸ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಹೆಚ್ಚಾಗುತ್ತಿರುವ ಅಪಘಾತ ಸಂಖ್ಯೆ ತಗ್ಗಿಸಲು ಹಾಗೂ ಉಲ್ಲಂಘನೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಂಚಾರ ಪೊಲೀಸರು ಪಣ ತೊಟ್ಟಿದ್ದಾರೆ. ಹೆಚ್ಚು ಟ್ರಾಫಿಕ್ ಉಲ್ಲಂಘನೆ ಮಾಡಿದವರಿಗೆ ಹೆಚ್ಚು ಪ್ರೀಮಿಯಂ ಹಾಗೂ ಕಡಿಮೆ ಉಲ್ಲಂಘನೆ ಮಾಡಿದವರಿಗೆ ಕಡಿಮೆ ಪ್ರೀಮಿಯಂ ವಿಧಿಸುವ ಹಾಗೆಯೇ ವಿಮಾ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.
ಕಟ್ಟುನಿಟ್ಟಾಗಿ ಪಾಲನೆ ಮಾಡುವ ವಾಹನ ಸವಾರರಿಗೆ ಇನ್ಶೂರೆನ್ಸ್ ಒಂದು ವರ್ಷಕ್ಕೆ ಕಟ್ಟಿದರೆ ಅಂತಹವರಿಗೆ ಎರಡು ಅಥವಾ ಮೂರು ವರ್ಷಗಳ ಕಾಲ ವಿಮಾ ಅವಧಿ ವಿಸ್ತರಣೆ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗುತ್ತಿದ್ದು, ಅಂತಿಮವಾದ ಬಳಿಕ ನಿಯಮ ಜಾರಿ ತರಲಾಗುವುದು ಎಂದು ಸಂಚಾರಿ ವಿಭಾಗದ ಡಿಸಿಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.