ಬೆಂಗಳೂರು:ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಬಿ ಫಾರಂ ನನ್ನ ಬಳಿ ಇದೆ. ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ರಘುನಾಥ್ ನಾಯ್ಡು ತಿಳಿಸಿದ್ದಾರೆ.
ತಮ್ಮ ಬದಲು ಸಂಸದ ಡಿಕೆ ಸುರೇಶ್ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಬಿ ಫಾರಂ ತಡೆ ಹಿಡಿಯಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪದ್ಮನಾಭನಗರದಿಂದ ಸ್ಪರ್ಧೆ ಮಾಡುವಂತೆ ಸಂಸದ ಡಿಕೆ ಸುರೇಶ್ ಅವರನ್ನು ಆಹ್ವಾನಿಸಿದ್ದು ನಿಜ. ಹಾಗಂತ ನನಗೆ ಅಧ್ಯಕ್ಷರು ನಾಮಪತ್ರ ಸಲ್ಲಿಕೆ ಬೇಡ ಎಂದು ಹೇಳಿಲ್ಲ. ನಾನೇ ನಾಮಪತ್ರ ಸಲ್ಲಿಕೆ ಮಾಡುವುದನ್ನು ತಡ ಮಾಡಿದ್ದೇನೆ. 17ನೇ ತಾರೀಖು ನಾಮಪತ್ರ ಸಲ್ಲಿಕೆ ಮಾಡಬೇಕಿತ್ತು. ಡಿಕೆ ಶಿವಕುಮಾರ್ ಜೊತೆ ಮಾತಾಡಿದ್ದೇನೆ. ಡಿಕೆ ಸುರೇಶ್ ಅವರನ್ನು ನಿಲ್ಲಿಸಿ ಎಂದಿದ್ದೇನೆ. ಅವರು ಬಂದರೆ ಕ್ಷೇತ್ರಕ್ಕೆ ಇನ್ನಷ್ಟು ಬಲ ಬರುತ್ತದೆ. ಈಗಲೂ ನಾನು ಅವರಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ಧ ಎಂದು ರಘುನಾಥ್ ನಾಯ್ಡು ತಿಳಿಸಿದರು.
ಸುರೇಶ್ ಅಭ್ಯರ್ಥಿ ಆದರೆ, 50 ರಿಂದ 70 ಸಾವಿರ ಮತಗಳಿಂದ ಮುನ್ನಡೆ ಪಡೆದು ಗೆಲುವು ಸಾಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಬಳಿ ಹೇಳಿದ್ದೇನೆ. ನೀನೇ ಸ್ಪರ್ಧೆ ಮಾಡು, ಸುಲಭವಾಗಿ ಗೆಲುವು ಸಾಧಿಸುತ್ತಿಯಾ ಎಂದು ಹೇಳಿದ್ದಾರೆ ಎಂದು ನಾಯ್ಡು ಹೇಳಿದರು. ಡಿಕೆ ಸುರೇಶ್ ಅವರು ನಿಂತರೆ ಆರ್ ಅಶೋಕ್ ಸೋಲುತ್ತಾರೆ ಅನ್ನುವುದು ನನ್ನ ಅಭಿಪ್ರಾಯ. ಆರ್ ಅಶೋಕ್ ಎರಡು ಕಡೆನೂ ಸೋಲಬೇಕು ಎಂಬುದು ನನ್ನ ಆಸೆ. ಆದರೆ, ಪಾರ್ಟಿ ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಬಿ ಫಾರಂ ಸದ್ಯ ನನ್ನ ಕಡೆ ಇದೆ, ಭರ್ತಿ ಮಾಡಿದ್ದೇನೆ. ನಾಳೆ ಬೆಳಗ್ಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಡಿಕೆ ಸುರೇಶ್ ಬಂದು ನಿಲ್ಲಲಿ ಎಂದು ಮನವಿ ಮಾಡಿದ್ದೇನೆ. ಡಿಕೆ ಶಿವಕುಮಾರ್ ಅವರು ನೋಡೋಣ, ನಿರ್ಧಾರ ಮಾಡೋಣ ಎಂದು ನಿನ್ನೆ ರಾತ್ರಿ ಹೇಳಿದರು ಎಂದು ತಿಳಿಸಿದ್ದಾರೆ.