ಬೆಂಗಳೂರು: ಯೋಗೇಶ್ವರ್ ಸಚಿವ ಸ್ಥಾನಕ್ಕೆ ಕುತ್ತು ಉಂಟಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಬೆನ್ನಲ್ಲೇ, ನಿರ್ಮಲಾನಂದನಾಥ ಸ್ವಾಮಿಗಳ ಸಹಾಯ ಪಡೆದು ಮಠಾಧೀಶರ ಮುಖಾಂತರ ಸಂಧಾನ ಮಾಡಿ ಡ್ಯಾಮೇಜ್ ಕಂಟ್ರೋಲ್ಗೆ ಯೋಗೇಶ್ವರ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಸಿ.ಪಿ.ಯೋಗೇಶ್ವರ್ ಹೇಳಿಕೆಯನ್ನು ಖಂಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸೇರಿದಂತೆ ಕೆಲ ಬಿಜೆಪಿ ಶಾಸಕರು ಹಾಗೂ ಹಲವು ಮಠಾಧೀಶರು ಯೋಗೇಶ್ವರ್ ವಿರುದ್ಧ ಮಾತನಾಡಿ ಸಹಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಲಾನಂದನಾಥ ಸ್ವಾಮಿಗಳ ಸಹಾಯ ಪಡೆದು ಡ್ಯಾಮೇಜ್ ಕಂಟ್ರೋಲ್ಗೆ ಯೋಗೇಶ್ವರ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜಿಎಸ್ ಶಾಖಾಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದ ಸಚಿವ ಸಿ.ಪಿ.ಯೋಗೇಶ್ವರ್ ರಾಮನಗರದ ಹೊರವಲಯದಲ್ಲಿರುವ ಬಿಜಿಎಸ್ ಶಾಖಾಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಮೊನ್ನೆ ಭೇಟಿ ಮಾಡಿ ಆಶೀರ್ವಾದ ಪಡೆದು ಬಂದಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಯೋಗೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾನು ನೀಡಿರುವ ಹೇಳಿಕೆ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ ಮತ್ತು ಸಂಚಲನ ಸೃಷ್ಟಿಸುತ್ತದೆ ಎಂದು ಭಾವಿಸಿರಲಿಲ್ಲ. ನನ್ನ ವಿರುದ್ಧ ಕೆಲ ಸ್ನೇಹಿತರು ಮಾತನಾಡಿದ್ದಾರೆ, ಅವರ ಮಾತುಗಳಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ. ಯೋಗೇಶ್ವರ್ ಇನ್ನೂ ನಾಲ್ವರು ಸ್ವಾಮೀಜಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದರು.
ಈ ಎಲ್ಲಾ ಬೆಳವಣಿಗಳ ನಡುವೆಯೇ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ದಾಳ ಉರುಳಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೈಕಮಾಂಡ್ ಬಳಿ ಶಾಸಕರ ನಿಲುವು ಮನದಟ್ಟು ಮಾಡಿ ಸಿಎಂ ಬದಲಾವಣೆ ಕೂಗಿಗೆ ಬ್ರೇಕ್ ಹಾಕುವ ತಂತ್ರವನ್ನು ವಿಜಯೇಂದ್ರ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದ ರಾಜಕೀಯ ವಿದ್ಯಮಾನ, ಕೊರೊನಾ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ನೀಡಿದ ಹೇಳಿಕೆಯಿಂದಾಗಿ ಅನಗತ್ಯ ಗೊಂದಲ ಸೃಷ್ಟಿ, ಸಚಿವರು ಮತ್ತು ಶಾಸಕರ ಅಸಮಾಧಾನ ವಿಷಯದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಖಾಸಗಿ ವಿಚಾರಕ್ಕಾಗಿ ವಿಜಯೇಂದ್ರ ದೆಹಲಿ ಭೇಟಿ
ಇನ್ನು, ವಿಜಯೇಂದ್ರ ಖಾಸಗಿ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಿದ್ದಾರೆ. ಹೋದಾಗ ಹಿರಿಯರನ್ನು ಭೇಟಿಯಾಗಿ ಬಂದಿದ್ದಾರೆ ಅಷ್ಟೇ. ನಾಯಕತ್ವದ ಬದಲಾವಣೆಯ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಸರ್ವ ಸಮ್ಮತವಾಗಿ ಯಡಿಯೂರಪ್ಪನವರೇ ರಾಜ್ಯ ಬಿಜೆಪಿ ನಾಯಕರು. ಮುಖ್ಯಮಂತ್ರಿಯ ಬದಲಾವಣೆ ಬಗ್ಗೆ ಒಬ್ಬ ಶಾಸಕ ಮಾತನಾಡಲು ಸಾಧ್ಯವಿಲ್ಲ, ಎಲ್ಲಾ ಶಾಸಕರು ಅಥವಾ ಹೈಕಮಾಂಡ್ ತೀರ್ಮಾನ ಮಾಡಬೇಕು. ಈ ವಿಚಾರದಲ್ಲಿ ನಾನು ಎಲ್ಲಾ ಶಾಸಕರಿಗೂ ಹೇಳಿದ್ದೇನೆ, ಈ ಬಗ್ಗೆ ಯಾರು ಕೂಡ ಮಾತನಾಡಬಾರದು ಎಂದು. ಸದ್ಯಕ್ಕೆ ಕೋವಿಡ್ಗೆ ಸಂಬಂಧಿಸಿದ ಕೆಲಸ ಮಾತ್ರ ಮಾಡಬೇಕು. ಅದನ್ನು ಮೀರಿ ಬೇರೆ ಏನಾದರೂ ಮಾತನಾಡಿದರೆ ಪಾರ್ಟಿ ಗಮನಿಸುತ್ತದೆ. ನಿಯಮ ಮೀರಿ ಮಾತನಾಡಿದರೆ ಅತಂಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ಸಚಿವ ಸಿ.ಪಿ. ಯೋಗೇಶ್ವರ್ ಬಹಿರಂಗವಾಗಿಯೇ ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಸಿಎಂ ಯಡಿಯೂರಪ್ಪಗೆ ಕೆಲವು ವಿಚಾರ ತಿಳಿಸುವ ಸಲುವಾಗಿ ಬಿಜೆಪಿಯ ಕೆಲ ಶಾಸಕರು ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು.
ಚರ್ಚೆಗೆ ಕಾರಣವಾಗಿದ್ದು ಯೋಗೇಶ್ವರ್ ಹೇಳಿಕೆ : ಸಚಿವ ಸಿ.ಪಿ. ಯೋಗೇಶ್ವರ್, ಬಿಜೆಪಿಯ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ. ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸ್ವಪಕ್ಷದವರ ವಿರುದ್ಧವೇ ಅವರು ಹರಿಹಾಯ್ದಿದ್ದರು.
ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮಾಡುವ ಬಗ್ಗೆ ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೇಫ್ ಆಗಿದ್ದು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ನಿಂದ ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನೆ ಆಗಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ಹೋಗಿದ್ದ ಸಚಿವ ಸಿ.ಪಿ ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿರಲಿಲ್ಲ. ಹೀಗಾಗಿ, ನಿರಾಸೆಯಿಂದ ಅವರು ದೆಹಲಿಯಿಂದ ವಾಪಸ್ ಆಗಿದ್ದರು.