ಬೆಂಗಳೂರು: ಆರ್ಎಸ್ಎಸ್ ಮತ್ತು ಬಜರಂಗದಳ ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ತುಷ್ಟೀಕರಣಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆಯೂ ಆರ್ಎಸ್ಎಸ್ ಅನ್ನು ನಿಷೇಧ ಮಾಡುವ ಕೆಲಸ ನಡೆದಿತ್ತು. ಅವರನ್ನು ಜನತೆ ಮನೆಗೆ ಕಳಿಸಿದ್ದಾರೆ. ಸಂಘ ಪರಿವಾರವನ್ನು ನಿಷೇಧ ಮಾಡುವ ಶಕ್ತಿ ಯಾರಿಗೂ ಇಲ್ಲ. ಅವರಿಗೆ ತಾಕತ್ತಿದ್ದರೆ ಆರ್ಎಸ್ಎಸ್ ಮತ್ತು ಬಜರಂಗದಳವನ್ನು ನಿಷೇಧಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸರ್ಕಾರ ರಚನೆ ಆಗಿದೆ. ಸಿಎಂ, ಡಿಸಿಎಂ ಜೊತೆ 8 ಜನರು ಕೂಡ ಸಚಿವರು ಆಗಿದ್ದಾರೆ. ಆ 8 ಸಚಿವರು ಮಾತಾಡೋದು ನೋಡಿದರೆ ದ್ವೇಷದ, ಸೇಡಿನ ರಾಜಕಾರಣ ಮಾಡಲು ಪ್ರಾರಂಭ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಭಿವೃದ್ಧಿಗಿಂತ ಸೇಡು, ದ್ವೇಷದ ರಾಜಕಾರಣ ಅವರಿಗೆ ಮುಖ್ಯವಾಗಿದೆ. ಅವರು ಏನೇ ಮಾಡಿದರೂ ಅದನ್ನು ಎದರಿಸಲು ನಾವು ಸಿದ್ದರಿದ್ದೇವೆ. ಇದನ್ನು ನಾವು ಸಮರ್ಥವಾಗಿ ಎದುರಿಸುವುದಲ್ಲದೇ ಅವರ ವಿಚಾರವನ್ನು ನಾವು ಹಿಮ್ಮೆಟ್ಟಿಸುತ್ತೇವೆ ಎಂದು ಟಾಂಗ್ ನೀಡಿದರು.
ಸಮಸ್ಯೆಗಳನ್ನು ಬಗೆಹರಿಸಲು ತುರ್ತಾದ ನಿರ್ಣಯ ಎಲ್ಲೂ ಕಾಣುತ್ತಿಲ್ಲ. ರಾಜ್ಯದಲ್ಲಿ ಇವತ್ತು ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಆದರೆ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಕೊಟ್ಟಿಲ್ಲ. ಬರೀ ಸೂಚನೆ ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಹಣ ಕೂಡ ಬಿಡುಗಡೆ ಮಾಡಿಲ್ಲ. ಬರಪೀಡಿತ ತಾಲೂಕುಗಳು, ಕುಡಿಯುವ ನೀರಿನ ಕೊರತೆ ಇರುವ ತಾಲೂಕುಗಳ ಬಗ್ಗೆ ಪತ್ತೆ ಹಚ್ಚಿಲ್ಲ. ಡಿಸಿ ಅಕೌಂಟ್ನಲ್ಲಿ ಸಾಕಷ್ಟು ಹಣ ಇದೆ. ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಸಿಎಂ ಅವರಿಂದ ನಿರ್ದೇಶನ ಹೋಗಿಲ್ಲ ಎಂದು ಆರೋಪಿಸಿದರು.
ಸಚಿವರಿಗೆ ಇನ್ನೂ ಖಾತೆಯೇ ಹಂಚಿಕೆ ಆಗಿಲ್ಲ. ಅವರಿಗೆ ಇನ್ನೂ ಅಧಿಕಾರನೇ ಸಿಕ್ಕಿಲ್ಲ. ಕೇವಲ ಇವರು ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ನಾನು ಅಸೆಂಬ್ಲಿಯಲ್ಲೂ ಈ ಮಾತು ಕೇಳಿದೆ. ಆದರೆ, ಸಿಎಂ ಸಂಪುಟ ವಿಸ್ತರಣೆ ನಂತರವೇ ಖಾತೆ ಹಂಚಿಕೆ ಎಂದರು. ನಾನು ನನಗೋಸ್ಕರ ಈ ಮಾತು ಕೇಳಲಿಲ್ಲ. ಜನರಿಗಾಗಿ ಈ ಮಾತು ಕೇಳಿದ್ದು ,ಈ ರೀತಿಯ ಆಡಳಿತವನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಪ್ರತಿ ನಿತ್ಯ ಕೇಸ್ ಹಾಕುತ್ತಿದ್ದಾರೆ. ಅಶ್ವತ್ಥ ನಾರಾಯಣ್, ಹರಿಶ್ ಪೂಂಜಾ ವಿರುದ್ಧ ಕೇಸ್ ಹಾಕಿದ್ದಾರೆ. ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ವಾಕ್ ಸ್ವಾತಂತ್ರ್ಯ ಕೊಟ್ಟಿದೆ. ರಾಜಕೀಯ ಟೀಕೆ ಮಾಡಿದರೆ ಕೇಸ್ ಹಾಕುತ್ತೇವೆ ಅಂತಿದ್ದೀರಲ್ಲ ಇದು ಒಂದು ದುರಹಂಕಾರದ ಆಡಳಿತ, ದ್ವೇಷದ ಆಡಳಿತ, ದಮನಕಾರಿ ಆಡಳಿತ ಎನ್ನುವುದು ಪ್ರಾರಂಭದಲ್ಲಿ ಕಾಣಿಸುತ್ತದೆ. ಜನರನ್ನು ಭಯಪಡಿಸಿ ಆಡಳಿತ ಮಾಡುವ ಭ್ರಮೆ ಇವರಲ್ಲಿದೆ. ಜನ ಮನ್ನಣೆ ಪಡೆದ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಶಕ್ಕೆ ಒಳಗಾಗುತ್ತದೆ ಎಂದು ಟೀಕಿಸಿದರು.
ಆರ್ ಎಸ್ ಎಸ್ ಮತ್ತು ಭಜರಂಗದಳ ಬ್ಯಾನ್ ಬಗ್ಗೆ ಹೇಳುತ್ತಿದ್ದಾರೆ. ಯಾವುದೇ ಸಂಘ ಸಂಸ್ಥೆಯನ್ನು ಬ್ಯಾನ್ ಮಾಡುವ ಅಧಿಕಾರ ಇವರಿಗಿಲ್ಲ, ಅದನ್ನು ಮಾಡೋದು ಕೇಂದ್ರ ಸರ್ಕಾರ. ಇದೆಲ್ಲ ಗೊತ್ತಿದ್ದರೂ ತುಷ್ಟೀಕರಣ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಯಾರಿಗೆ ತುಷ್ಟೀಕರಣ ಮಾಡುತ್ತಿದ್ದಾರೋ ಅವರಿಗೂ ಇವರು ಯಾಮಾರಿಸುತ್ತಿದ್ದಾರೆ.