ಬೆಂಗಳೂರು: ನಿಮ್ಮ ಸರ್ಕಾರದಲ್ಲಿ ಅತೃಪ್ತ ಶಾಸಕರ ದೊಡ್ಡಪಟ್ಟಿ ಇದೆ. ನಾನು ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಈ ದೌರ್ಭಾಗ್ಯ ಬರಬಾರದಿತ್ತು. ನೀವು ರಾಜೀನಾಮೆ ನೀಡುವುದು ಸೂಕ್ತ. ಸಿಎಂ ಡಿಸಿಎಂ ಇಬ್ಬರೂ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಮಂತ್ರಿಗಳು, ಶಾಸಕರು ಸೇರಿ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ. ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನವದೆಹಲಿ ಪ್ರವಾಸದಿಂದ ವಾಪಸ್ ಆದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಅವನತಿ ನಿನ್ನೆಯಿಂದ ಆರಂಭವಾಗಿದೆ. ಸಿಎಂ ಆಗಿರೋ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಅಂತ ಹೇಳಿಕೆ ನೀಡಿದ್ದಾರೆ. ಅದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಇದರ ತೀರ್ಮಾನ ಕೇಂದ್ರ ನಾಯಕರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಅರ್ಥ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರುವುದಿಲ್ಲ ಅನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಕೆಲವರು ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಬೇಕು ಅಂದರೆ ಮತ್ತೆ ಕೆಲವರು ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದಕ್ಕೆ ಉತ್ತರ ನೀಡಿರೋ ಸಿದ್ದರಾಮಯ್ಯ ಹಾದಿ ಬೀದಿಯಲ್ಲಿ ಹೇಳೋರ ಹೇಳಿಕೆಗೆ ನಾನು ತಲೆಕೆಡಿಸಿಕೊಳ್ಳಲ್ಲ ಅಂದಿದ್ದಾರೆ. ಆದರೆ, ಅದನ್ನು ಹೇಳಿರೋದು ಕಾಂಗ್ರೆಸ್ ಶಾಸಕರು ಎಂದು ತಿರುಗೇಟು ನೀಡಿದ್ದಾರೆ.
ಆರ್ಥಿಕವಾಗಿ ಪಾಪರ್ ಆಗಿರುವ ಸರ್ಕಾರ:ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಯೋಜನೆಗಳ ಕಾಮಗಾರಿ ಆರಂಭವಾಗಿದ್ದವು. ಈ ಸರ್ಕಾರ ಬಂದ ಬಳಿಕ ಯಾವ ಕೆಲಸ ಕೂಡ ಆಗಿಲ್ಲ. ಅರ್ಧ ಬುಟ್ಟಿ ಮಣ್ಣು ಕೂಡ ಹಾಕಿಲ್ಲ. ಶಾಸಕರುಗಳಿಗೆ ನಾವು ಯಾಕಾದ್ರೂ ಆಯ್ಕೆಯಾಗಿದ್ದೇವೆ ಅಂತಿದ್ದಾರೆ. ಶಾಸಕರ ಕ್ಷೇತ್ರಕ್ಕೆ ಹಣ ಕೊಟ್ಟಿಲ್ಲ. ಒಂದು ರೂಪಾಯಿ ಹಣ ಬಿಡುಗಡೆ ಆಗಿಲ್ಲ. ಇದೊಂದು ಆರ್ಥಿಕವಾಗಿ ಪಾಪರ್ ಆಗಿರೋ ಸರ್ಕಾರ ಎಂದು ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸಿಎಂ ಆಗಲು ನಾನೂ ಸಿದ್ಧ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಸಂಬಂಧಿಸಿದಂತೆ ಈಶ್ವರಪ್ಪ ಮಾತನಾಡಿ, ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ದಲಿತರ ಹೆಸರು ಹೇಳಿ ವೋಟು ಪಡೆಯುತ್ತಿದ್ದಾರೆ. ನಮ್ಮನ್ನು ಕೋಮುವಾದಿಗಳು ಅಂತ ಹೇಳ್ತಿದ್ದಾರೆ. ಜಾತಿಯ ಹೆಸರಲ್ಲಿ ಸ್ವಾತಂತ್ರ್ಯ ಬಂದ ಬಳಿಕವೂ ಮತ ಪಡೆಯುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಮುಕ್ತಿ ಕೊಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.