ಬೆಂಗಳೂರು :ಬಂಧನಕ್ಕೆ ಒಳಗಾಗಿರುವ ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರಿಗೆ ನ್ಯಾಯಾಲಯವೇ ಕಾನೂನು ನೆರವಿನ ಮೂಲಕ ವಕೀಲರನ್ನು ನೇಮಿಸಿಕೊಡುವ ಬದ್ಧತೆ ಹೊಂದಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೋಮಶೇಖರ ಅಲಿಯಾಸ್ ಸೋಮ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ಧ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಂವಿಧಾನದ ವಿಧಿ 39(ಎ) ನಲ್ಲಿ ಆರ್ಥಿಕ ಕಾರಣಗಳೂ ಸೇರಿದಂತೆ ಯಾವುದೇ ಅಸಮರ್ಥತೆಗಳ ಕಾರಣದಿಂದಾಗಿ ಯಾವುದೇ ನಾಗರಿಕನಿಗೆ ನ್ಯಾಯ ಪಡೆಯುವ ಅವಕಾಶವನ್ನು ನಿರಾಸರಿಸುವಂತಿಲ್ಲ ಎಂದು ಹೇಳಿದೆ.
ಹಾಗೆಯೇ, ಇಂತಹ ಸಂದರ್ಭಗಳಲ್ಲಿ ಉಚಿತ ಕಾನೂನು ನೆರವು ನೀಡಲು ಅಗತ್ಯ ಕಾನೂನು ರೂಪಿಸುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ. ಈ ಉದ್ದೇಶವನ್ನು ಈಡೇರಿಸಲು ಕಾನೂನು ಸೇವಾ ಪ್ರಾಧಿಕಾರ ರೂಪಿಸಲಾಗಿದೆ.
ಈ ಪ್ರಾಧಿಕಾರವು ರಾಷ್ಟ್ರೀಯ ಮಟ್ಟದಿಂದ ಹಿಡಿದು ತಾಲೂಕು ಹಂತದವರೆಗೆ ಇದ್ದು, ಸಿಆರ್ಪಿಸಿ ಸೆಕ್ಷನ್ 304ರ ಪ್ರಕಾರ ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿದೆ ಎಂದು ಹೇಳಿದೆ.
ಅಲ್ಲದೇ, ಅರ್ಜಿದಾರರ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಈತನ ಪರ ವಕೀಲರು ಪಾಟಿ ಸವಾಲಿನ ವಿಚಾರಣೆ ವೇಳೆ ಹಾಜರಾಗಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವು ನೀಡುವ ಬದ್ಧತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿತ್ತು.