ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ನಿತ್ಯ ಸಾವಿರಾರು ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇತ್ತ ಕೊರೊನಾ ವಿರುದ್ಧ ಹೋರಾಡಲು ವೈದ್ಯರು ಧರಿಸುವ ಪಿಪಿಇ ಕಿಟ್ ಬಳಕೆಯು ಹೆಚ್ಚಿದೆ. ಸೋಂಕಿತ ರೋಗಿಯ ಚಿಕಿತ್ಸೆಗೆ ಬಳಸಿ, ಬಳಿಕ ಎಸೆಯುವ ಈ ಪಿಪಿಇ ಕಿಟ್ ವಿಲೇವಾರಿ ಮಾಡುವುದು ಹಾಗೂ ಅದನ್ನ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ಹೊಸ ಸಂಶೋಧನೆ ಮಾಡಿದ್ದಾರೆ. ಪರಿಸರಕ್ಕೆ ಹಾನಿ ಮಾಡದ ಹಾಗೂ ಬಹುಬೇಗನೆ ಮಣ್ಣಿನಲ್ಲಿ ಕರಗಬಲ್ಲ ಹಸಿರು ಪಿಪಿಇ ಕಿಟ್ ಅನ್ನು ಸಂಶೋಧಿಸಿದ್ದಾರೆ.
ಐಡಿಯಾಥಾನ್ ಕಾರ್ಯಕ್ರಮ ಗ್ರೀನ್ ಪಿಪಿಇ ಕಿಟ್ ಮತ್ತು ಕ್ಯಾಪ್ಸೂಲ್ ಸ್ಯಾನಿಟೈಸರ್ ಸಂಶೋಧನೆ ಈ ಬಗ್ಗೆ ಮಾತನಾಡಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಪತಿ ಡಾ. ಎಸ್ ಸಚ್ಚಿದಾನಂದ, ಕೊರೊನಾದ ಈ ಕಾಲಘಟ್ಟದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಅಂದರೆ ವೈದ್ಯರು, ಸಿಬ್ಬಂದಿ ವರ್ಗದವರು ಪಿಪಿಇ ಕಿಟ್ ಧರಿಸಲೇಬೇಕು. ಆದರೆ ಈ ಕಿಟ್ ಬಳಸಿದ ಬಳಿಕ ನಿಷ್ಕ್ರಿಯ ಮಾಡುವುದು ಬಹಳ ಮುಖ್ಯ. ಹೀಗಾಗಿ, ಐಡಿಯಾಥಾನ್ ಹೆಸರಲ್ಲಿ ಸುಮಾರು 200 ಸಂಶೋಧನಾ ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ 10 ಸಂಶೋಧನಾ ಪ್ರಸ್ತಾವನೆಯನ್ನು ಅಂತಿಮಗೊಳಿಸಿದ್ದು, ಅದರಲ್ಲಿ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಗ್ರೀನ್ ಪಿಪಿಇ ಕಿಟ್ ಐಡಿಯಾ ಕೂಡ ಒಂದಾಗಿತ್ತು ಎಂದು ತಿಳಿಸಿದರು.
ಏನಿದು ಕ್ಯಾಪ್ಸೂಲ್ ಸ್ಯಾನಿಟೈಸರ್?
ಕೊರೊನಾ ಬಂದ್ಮೆಲೆ ಅಂತೂ ಸ್ವಚ್ಛತೆ ಕಡೆ ಎಂದಿಗಿಂತಲೂ ಹೆಚ್ಚು ಗಮನ ಕೊಡಲಾಗುತ್ತಿದೆ. ಜನರು ಪ್ರತಿ ಗಂಟೆಗೊಮ್ಮೆ ಕೈ ಸ್ವಚ್ಛಮಾಡಿಕೊಳ್ತಿದ್ದಾರೆ. ಕೊರೊನಾ ಹತ್ತಿರಕ್ಕೆ ಬರದಂತೆ ನೋಡಿಕೊಳ್ಳಲು ಫೇಸ್ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಎಷ್ಟು ಮುಖ್ಯವೋ, ಅಷ್ಟೇ ಕೈಗಳನ್ನ ಸ್ವಚ್ಛವಾಗಿ ಇಟ್ಟಕೊಳ್ಳುವುದು ಮುಖ್ಯ. ಹೀಗಾಗಿ ಮಾರುಕಟ್ಟೆಯಲ್ಲಿ ನೂರಾರು ಬಗೆಯ ಸ್ಯಾನಿಟೈಸರ್ಗಳು ಬಂದಿವೆ. ಇದೀಗ ಕ್ಯಾಪ್ಸೂಲ್ ರೀತಿಯ ಸ್ಯಾನಿಟೈಸರ್ಅನ್ನು ಕೂಡ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. ವಿವಿಯ ಐಡಿಯಾಥಾನ್ ನಲ್ಲಿ ಈ ಐಡಿಯಾವು ವಿಶೇಷವಾಗಿದ್ದು, ಜನರು ಮಾತ್ರೆ ರೂಪದ ಸ್ಯಾನಿಟೈಸರ್ ಅನ್ನ ಆರಾಮಾಗಿ ಎಲ್ಲಿ ಬೇಕಾದರೂ ಕ್ಯಾರಿ ಮಾಡಬಹುದಾಗಿದೆ.