ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಹಬ್ಬ ಇಂದಿನಿಂದ ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಭಾರತ ಈ ಬಾರಿ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಸಲದ ವಿಶ್ವಕಪ್ ಅನೇಕ ಕಾರಣಗಳಿಗಾಗಿ ವಿಶೇಷವೆನಿಸಿದೆ. ಸಾಕಷ್ಟು ದಿಗ್ಗಜ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಎಂದು ಬಿಂಬಿತವಾಗುತ್ತಿದ್ದರೆ, ಮತ್ತಷ್ಟು ಯುವ ಕ್ರಿಕೆಟಿಗರಿಗೆ ಇದು ಮೊದಲ ಅವಕಾಶ. ಈ ಬಾರಿಯ ವಿಶ್ವಕಪ್‌ನ ತಂಡಗಳಲ್ಲಿರುವ ಅತ್ಯಂತ ಹಿರಿಯ ಹಾಗೂ ಕಿರಿಯ ಆಟಗಾರರ ವಿವರ ಇಲ್ಲಿದೆ.
ಅಫ್ಘಾನಿಸ್ತಾನ :ವಿಶ್ವಕಪ್ ಟೂರ್ನಿಯಲ್ಲಿರುವ ಅತಿ ಕಿರಿಯ ತಂಡದವರೆಂದರೆ ಅದು ಅಫ್ಘಾನಿಸ್ತಾನ. ನೂರ್ ಅಹಮದ್ (18 ವರ್ಷ 274 ದಿನಗಳು) ಅಫ್ಘನ್ ತಂಡದಲ್ಲಿರುವ ಕಿರಿಯ ಸದಸ್ಯನಾದರೆ, ಮೊಹಮ್ಮದ್ ನಬಿ (38 ವರ್ಷ 276 ದಿನಗಳು) ತಂಡದ ಹಿರಿಯ ಆಟಗಾರನಾಗಿದ್ದಾರೆ.
ಶ್ರೀಲಂಕಾ :1996ರ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ಈ ಬಾರಿಯ ವಿಶ್ವಕಪ್‌ನಲ್ಲಿ ಹೆಚ್ಚು ಕಿರಿಯ ಸದಸ್ಯರನ್ನು ಹೊಂದಿರುವ ಎರಡನೇ ತಂಡ. ದುನಿತ್ ವೆಲ್ಲಾಲಗೆ (20 ವರ್ಷ 290 ದಿನಗಳು) ತಂಡದ ಕಿರಿಯ ಆಟಗಾರನಾದರೆ, ದಿಮುತ್ ಕರುಣರತ್ನೆ (35 ವರ್ಷ 166 ದಿನಗಳು) ಸಿಂಹಳೀಯರ ತಂಡದ ಹಿರಿಯ ಅನುಭವಿ ಆಟಗಾರರಾಗಿದ್ದಾರೆ.
ಬಾಂಗ್ಲಾದೇಶ :ಚೊಚ್ಚಲ ವಿಶ್ವಕಪ್ ಚಾಂಪಿಯನ್ಶಿಪ್ ಕನಸಿನಲ್ಲಿರುವ ಬಾಂಗ್ಲಾದೇಶ ಸಹ ಅನುಭವಿ ಹಾಗೂ ಕಿರಿಯ ಆಟಗಾರರ ಸಮ್ಮಿಶ್ರಣದಂತಿದೆ. ತಂಜಿಮ್ ಹಸನ್ ಸಕೀಬ್ (20 ವರ್ಷ 349 ದಿನಗಳು) ತಂಡದಲ್ಲಿರುವ ಕಿರಿಯ ಆಟಗಾರ. ಹಾಗೂ ಮೊಹಮ್ಮದುಲ್ಲಾ (37 ವರ್ಷ 242 ದಿನಗಳು) ತಂಡದ ಹಿರಿಯ ಆಟಗಾರ. ಅಲ್ಲದೇ 36 ವರ್ಷದ ಶಕೀಬ್ ಅಲ್ ಹಸನ್ ಹಾಗೂ ಮುಷ್ಫಿಕರ್ ರಹೀಂ ಕೂಡಾ ತಂಡದ ಹಿರಿಯ ಆಟಗಾರರಾಗಿದ್ದಾರೆ.
ಪಾಕಿಸ್ತಾನ :ವಿಶ್ವಕಪ್ ಕ್ಯಾಂಪೇನ್'ಗಾಗಿ ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡದಲ್ಲಿರುವ ಬಹುತೇಕ ಆಟಗಾರರಿಗೆ ಭಾರತ ಪ್ರವಾಸ ಹೊಸತು. ಮೊಹಮ್ಮದ್ ವಾಸೀಂ (22 ವರ್ಷ 40 ದಿನಗಳು) ಪಾಕಿಸ್ತಾನ ಪಾಳಯದಲ್ಲಿರುವ ಕಿರಿಯ ಆಟಗಾರನಾದರೆ ಫಕಾರ್ ಜಮಾನ್ (33 ವರ್ಷ 177 ದಿನಗಳು) ಅತಿ ಹಿರಿಯ ಸದಸ್ಯ ಎನಿಸಿದ್ದಾರೆ.
ನೆದರ್ಲೆಂಡ್ಸ್ :2011ರ ಬಳಿಕ ವಿಶ್ವಕಪ್ ಸಮರಕ್ಕೆ ಮರಳಿರುವ ಡಚ್ಚರು ಯುವ ಹಾಗೂ ಅನುಭವಿ ತಂಡದೊಂದಿಗೆ ಟೂರ್ನಿ ಪ್ರವೇಶಿಸಿದ್ದಾರೆ. ಆರ್ಯನ್ ದತ್ (20 ವರ್ಷ 145 ದಿನಗಳು) ನೆದರ್ಲೆಂಡ್ಸ್ ತಂಡದಲ್ಲಿರುವ ಕಿರಿಯ ಆಟಗಾರ. ನಂತರದ ಸ್ಥಾನದಲ್ಲಿ ಶರೀಜ್ ಅಹ್ಮದ್ (20 ವರ್ಷ 166 ದಿನಗಳು) ಹಾಗೂ ವಿಕ್ರಂಜೀತ್ ಸಿಂಗ್ (20 ವರ್ಷ 268 ದಿನಗಳು) ಇದ್ದರೆ, ವೆಸ್ಲೆ ಬರ್ರೇಸೀ (39 ವರ್ಷ 124 ದಿನಗಳು) ತಂಡದಲ್ಲಿರುವ ಹಿರಿಯ ಹಾಗೂ ನೆದರ್ಲೆಂಡ್ಸ್ ಪರ ಈ ಹಿಂದಿನ ವಿಶ್ವಕಪ್ ಆಡಿರುವ ಅನುಭವವಿರುವ ಆಟಗಾರರಾಗಿದ್ದಾರೆ.