ಬೆಂಗಳೂರು : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ 4 ಪಂದ್ಯಗಳ ಟಿಕೆಟ್ ಮಾರಾಟದ ದಿನಾಂಕವನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. ಆತಿಥೇಯ ಭಾರತ ಹಾಗೂ ನೆದರ್‌ಲ್ಯಾಂಡ್ಸ್ ನಡುವಿನ ಪಂದ್ಯ ಹೊರತುಪಡಿಸಿ ಉಳಿದ ಮೂರು ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಪಡೆಯಲು ಕ್ರೀಂಡಾಂಗಣದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ, ಬುಧವಾರ ಹಾಗೂ ಗುರುವಾರ ಕ್ರೀಡಾಂಗಣದ ನಾಲ್ಕು ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ನಡೆಯಲಿದೆ. ಅಕ್ಟೋಬರ್ 20 ರಂದು ನಡೆಯಲಿರುವ ಆಸ್ಟ್ರೇಲಿಯಾ-ಪಾಕಿಸ್ತಾನ, 26 ರಂದು ನಡೆಯಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಹಾಗೂ ನವೆಂಬರ್ 4ರಂದು ನಡೆಯಲಿರುವ ನ್ಯೂಜಿಲೆಂಡ್- ಪಾಕಿಸ್ತಾನ ಹಾಗೂ ನವೆಂಬರ್ 9ರಂದು ನಡೆಯಲಿರುವ ನ್ಯೂಜಿಲೆಂಡ್- ಶ್ರೀಲಂಕಾ ನಡುವಿನ ಪಂದ್ಯಗಳ ಟಿಕೆಟ್ ಮಾರಾಟ ಮಾಡಲಾಗುವುದು ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ಅಕ್ಟೋಬರ್ 17, 18 ಹಾಗೂ 19 ರಂದು ಕ್ರೀಡಾಂಗಣದ ಗೇಟ್ ಸಂಖ್ಯೆ 2 ಮತ್ತು 4 (ಕಬ್ಬನ್ ರಸ್ತೆ) ಹಾಗೂ ಗೇಟ್ ಸಂಖ್ಯೆ 16, 18ರಲ್ಲಿ (ಕ್ವೀನ್ಸ್ ರಸ್ತೆ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಟಿಕೆಟ್ ಖರೀದಿಗೆ ಅವಕಾಶವಿರಲಿದೆ. ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮಾತ್ರ ಲಭ್ಯವಿರಲಿದ್ದು, ಒಬ್ಬರಿಗೆ ಗರಿಷ್ಠ 2 ಟಿಕೆಟ್ ಮಾತ್ರ ನೀಡಲಾಗುವುದು. ಆನ್‌ಲೈನ್ ಪಾವತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್ಸಿಎನ ಮಾಧ್ಯಮ ಪ್ರಕಟಣೆ ತಿಳಿಸಿದೆ. ಕನಿಷ್ಠ 750 ರೂಪಾಯಿಗಳಿಂದ ಗರಿಷ್ಠ 25 ಸಾವಿರದವರೆಗೆ ಟಿಕೆಟ್ ದರ ನಿಗದಿಯಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಮತ್ತಷ್ಟು ಮೇಲ್ದರ್ಜೆಗೆ: ವಿಶ್ವಕಪ್‌ನಲ್ಲಿ ಐದು ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 20ರಂದು ಆಸ್ಟ್ರೇಲಿಯಾ - ಪಾಕಿಸ್ತಾನ, ಅಕ್ಟೋಬರ್ 26ರಂದು ಇಂಗ್ಲೆಂಡ್ - ಶ್ರೀಲಂಕಾ, ನವೆಂಬರ್ 4ರಂದು ನ್ಯೂಜಿಲೆಂಡ್ - ಪಾಕಿಸ್ತಾನ, ನವೆಂಬರ್ 9ರಂದು ನ್ಯೂಜಿಲೆಂಡ್ - ಶ್ರೀಲಂಕಾ ಹಾಗೂ ನವೆಂಬರ್ 12ರಂದು ಭಾರತ - ನೆದರ್ಲೆಂಡ್ಸ್ ನಡುವಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಕೆಲ ಪ್ರಮುಖ ಸೌಲಭ್ಯಗಳನ್ನ ಮೇಲ್ದರ್ಜೆಗೇರಿಸಲಾಗಿದೆ.
ಓದಿ:ಖಲಿಸ್ತಾನಿಗಳ ಬೆದರಿಕೆ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಿಗಿ ಪೊಲೀಸ್ ಭದ್ರತೆ