ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆಗೆ ಐಬಿಸಿ ಕಂಪೆನಿ ಒಲವು - etv bharat karnataka

ಐಬಿಸಿ ಕಂಪೆನಿಗೆ ನಮ್ಮ ಕೈಗಾರಿಕಾ ನೀತಿಯ ಪ್ರಕಾರ ಸಾಧ್ಯವಿರುವ ಪ್ರೋತ್ಸಾಹ ಮತ್ತು ಉತ್ತೇಜನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್​ ಭರವಸೆ ನೀಡಿದ್ದಾರೆ.

Etv Bharatibc-company-wants-to-investment-8-thousand-crores-in-the-state
ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆಗೆ ಐಬಿಸಿ ಕಂಪನಿ ಒಲವು: ಕಂಪನಿಗೆ ಅಗತ್ಯ ನೆರವು ನೀಡುವುದಾಗಿ ಎಂ ಬಿ ಪಾಟೀಲ್ ಭರವಸೆ

By

Published : Jun 19, 2023, 6:53 PM IST

ಬೆಂಗಳೂರು: ವಿದ್ಯುತ್‌ ಚಾಲಿತ ವಾಹನಗಳಿಗೆ ಅಗತ್ಯವಾದ ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರಾಗಿರುವ ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (ಐಬಿಸಿ) ರಾಜ್ಯದಲ್ಲಿ 8,000 ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿದೆ. ಈ ಸಂಬಂಧ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕಂಪೆನಿಯ ಉನ್ನತ ಪ್ರತಿನಿಧಿಗಳೊಂದಿಗೆ ಇಂದು ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದರು.

ಖನಿಜ ಭವನದಲ್ಲಿ ಮಾತನಾಡಿದ ಅವರು, ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ಆದರೆ ನಮ್ಮಲ್ಲಿ ಲೀಥಿಯಂ ಕೋಶಗಳ ಉತ್ಪಾದನೆ ನಡೆಯುತ್ತಿಲ್ಲ. ಐಬಿಸಿ ಕಂಪನಿ ಈ ನಿಟ್ಟಿನಲ್ಲಿ ಮುಂದೆ ಬಂದಿರುವುದು ಸ್ವಾಗತಾರ್ಹ. ಕಂಪೆನಿಯು ದೇವನಹಳ್ಳಿಯ ಬಳಿಯಿರುವ ಐಟಿಐಆರ್​ ಪಾರ್ಕ್‌ನಲ್ಲಿ 100 ಎಕರೆ ಜಮೀನನ್ನು ಕೇಳಿದೆ. ಕಂಪನಿ ಕೇಳಿರುವ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗೂ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.

ಐಬಿಸಿ ಕಂಪೆನಿಯು ರಾಜ್ಯದಲ್ಲೇ ನೆಲೆಯೂರುವಂತೆ ನೋಡಿಕೊಳ್ಳಲು ಅಗತ್ಯವಿರುವ ನೆರವು ನೀಡಲಾಗುವುದು. ರಾಜ್ಯದಲ್ಲಿ ಹೆಚ್ಚು ಹೂಡಿಕೆಯಾಗಿ, ಉದ್ಯೋಗ ಸೃಷ್ಟಿಯಾಗಬೇಕು. ಇದಕ್ಕೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಕಂಪೆನಿಯ ನಿಯೋಗಕ್ಕೆ ಭರವಸೆ ನೀಡಿದರು.

ಐಬಿಸಿ ಕಂಪನಿಯ ಅಧ್ಯಕ್ಷ ವೆಂಕಟೇಶ್‌ ವಲ್ಲೂರಿ ಮಾತನಾಡಿ, ಭಾರತಕ್ಕೆ 2030ರ ವೇಳೆಗೆ 150 ಗಿಗಾವ್ಯಾಟ್‌ನಷ್ಟು ಲೀಥಿಯಂ ಕೋಶಗಳು ಬೇಕಾಗುತ್ತವೆ. ಸದ್ಯಕ್ಕೆ ದೇಶದಲ್ಲಿ ಕೇವಲ 1.5 ಗಿಗಾವ್ಯಾಟ್‌ ಸಾಮರ್ಥ್ಯದ ಉತ್ಪಾದನೆ ಮಾತ್ರ ಆಗುತ್ತಿದ್ದು, ಬೇಡಿಕೆ ಮತ್ತು ಪೂರೈಕೆ ನಡುವೆ ಅಗಾಧ ವ್ಯತ್ಯಾಸವಿದೆ. ಈ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಭಾರೀ ಬೇಡಿಕೆ ಉಂಟಾಗಲಿದ್ದು, ನಾವು ಸದ್ಯಕ್ಕೆ 8,000 ಕೋಟಿ ಹೂಡಿಕೆಯ ಪ್ರಸ್ತಾವನೆ ಹೊಂದಿದ್ದೇವೆ. ಮುಂದಿನ 20 ವರ್ಷಗಳಲ್ಲಿ 12,300 ಕೋಟಿ ರೂ.ಗಳಿಗೂ ಹೆಚ್ಚು ಲಾಭ ತೆರಿಗೆ ರೂಪದಲ್ಲಿ ರಾಜ್ಯಕ್ಕೆ ಸಿಗಲಿದೆ ಎಂದು ಸಚಿವರಿಗೆ ವಿವರಿಸಿದರು.

ಐಬಿಸಿ ಕಂಪನಿಯ ಸ್ಥಾಪಕರೆಲ್ಲರೂ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ, ಭಾರತೀಯ ಪ್ರತಿಭಾವಂತರೇ ಆಗಿದ್ದಾರೆ. ಕಂಪನಿಯ ಉತ್ಪಾದನಾ ಘಟಕವು ರಾಜ್ಯದಲ್ಲಿ ಆರಂಭವಾದರೆ ಸಾವಿರಾರು ಉದ್ಯೋಗಗಳು ಕೂಡ ಸೃಷ್ಟಿಯಾಗಲಿದ್ದು, ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಲಿದೆ. ನಮ್ಮೊಂದಿಗೆ ದಕ್ಷಿಣ ಕೊರಿಯಾದ ತಂತ್ರಜ್ಞರು ಕೂಡ ಕೆಲಸ ಮಾಡಲಿದ್ದು, ಇದರ ಅಂತಿಮ ಲಾಭ ಕರ್ನಾಟಕಕ್ಕೆ ಸಿಗಲಿದೆ ಎಂದು ಅವರು ವಿವರಿಸಿದರು.

ಐಬಿಸಿ ಕಂಪನಿಯ ಸಹ ಸಂಸ್ಥಾಪಕರಾಗಿರುವ ಪ್ರಿಯದರ್ಶಿ ಪಾಂಡಾ, ಶಶಿ ಕುಪ್ಪಣ್ಣಗಾರಿ ಮುಂತಾದವರು ಈ ವಿಚಾರ ವಿನಿಮಯದಲ್ಲಿ ವರ್ಚುಯಲ್‌ ರೂಪದಲ್ಲಿ ಪಾಲ್ಗೊಂಡಿದ್ದರು. ಜತೆಗೆ ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

ಇದನ್ನೂ ಓದಿ:ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಮುಂದಾದ ಸರ್ಕಾರ: 7 ವಲಯಗಳಲ್ಲಿ ವಿಷನ್ ಗ್ರೂಪ್​ ರಚನೆ

ABOUT THE AUTHOR

...view details