ಬೆಂಗಳೂರು: ಭೂ ವ್ಯಾಜ್ಯದ ಭ್ರಷ್ಟಾಚಾರ ಪ್ರಕರಣ ಹಾಗೂ ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪೊಲೀಸ್ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಪ್ರಭಾವಶಾಲಿ ಉನ್ನತ ಅಧಿಕಾರಿಗಳಾದ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರನ್ನು ಭೂ ವ್ಯಾಜ್ಯ ಪ್ರಕರಣದಲ್ಲಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ಸರ್ಕಾರ ಬಂಧಿಸಿದೆ.
ಭೂವ್ಯಾಜ್ಯ ಪ್ರಕರಣದಲ್ಲಿ ಎಸಿಬಿಗೆ ತೀವ್ರ ತರಾಟೆ:ಕಳೆದ ವಾರ ಹೈಕೋರ್ಟ್ ಭೂ ವ್ಯಾಜ್ಯ ಪ್ರಕರಣದಲ್ಲಿ ಕಂದಾಯ ಇಲಾಖೆ ಮತ್ತು ಎಸಿಬಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಎಸಿಬಿಯೇ ಕಲೆಕ್ಷನ್ ಸೆಂಟರ್ ಆಗಿದೆ, ಭ್ರಷ್ಟಾಚಾರದ ಕೂಪವಾಗಿದೆ, ಎಸಿಬಿ ಅಧಿಕಾರಿಗಳೇ ಕಳಂಕಿತರಾಗಿದ್ದಾರೆ ಎಂದು ಎಸಿಬಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಅವರನ್ನು ಆರೋಪಿಯನ್ನಾಗಿ ಉಲ್ಲೇಖ ಮಾಡದಿರುವ ಎಸಿಬಿ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿತ್ತು.
ನಂತರ ಹೈಕೋರ್ಟ್ ಸ್ವತಃ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಆರೋಪಿಯನ್ನಾಗಿ ಮಾಡಲು ಎಸಿಬಿಗೆ ಆದೇಶ ಮಾಡಿತ್ತು. ಎಸಿಬಿಯ ಕಾರ್ಯನಿರ್ವಹಣೆ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮರು ದಿನವೇ ಅಲರ್ಟ್ ಆದ ಭ್ರಷ್ಟಾಚಾರ ನಿಗ್ರಹ ದಳ, ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಮೇಲೆ ದಿಢೀರ್ ದಾಳಿ ನಡೆಸಿ ವಿಚಾರಣೆಗೆ ಗುರಿಪಡಿಸಿತ್ತು.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸಹ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಅವರನ್ನು ತಕ್ಷಣವೇ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿ ಬೆಂಗಳೂರಿನ ಮಕ್ಕಳ ಹಕ್ಕು ಸಂರಕ್ಷಣೆ ಯೋಜನಾ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿ, ಮುಂದಿನ ವಿಚಾರಣೆ ವೇಳೆಗೆ ಹೈಕೋರ್ಟ್ ಎದುರು ಹಿರಿಯ ಅಧಿಕಾರಿಗಳ ಮೇಲೆ ತಾನು ತೆಗೆದುಕೊಂಡ ಶಿಸ್ತು ಕ್ರಮಗಳ ಬಗ್ಗೆ ವಿವರಿಸಲು ವೇದಿಕೆ ಸಜ್ಜುಪಡಿಸಿಕೊಂಡಿತು.