ಬೆಂಗಳೂರು:ನಾನು ಈ ಬಾರಿ ವಿಧಾನಸಭೆ ಚುನಾವಣೆಗೆ ನಿಲ್ಲೋದಿಲ್ಲ. ಈಗಾಗಲೇ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಇದು ನನ್ನ ಕೊನೆಯ ಅಧಿವೇಶನ, ನಾನು ಮತ್ತೆ ಈ ಸದನಕ್ಕೆ ಬರೋದಿಲ್ಲ ಹಾಗಂತ ಬಿಜೆಪಿ ನನ್ನನ್ನು ಕಡೆಗಣಿಸಿದೆ ಎಂದರ್ಥವಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾವುರಕಾಗಿ ನುಡಿದಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಗದ್ಗದಿತರಾಗಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇದು ನನಗೆ ಕೊನೆಯ ಅಧಿವೇಶನ, ನಾನು ಮುಂದಿನ ಅಧಿವೇಶನಕ್ಕೆ ಬರುವುದಿಲ್ಲ. ಏಕೆಂದರೆ ನಾನೇ ಹೇಳಿದಂತೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭಾವುಕರಾದರು. ಆಗ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್, ಸದಸ್ಯರಾದ ಪ್ರಿಯಾಂಕ ಖರ್ಗೆ, ಶಿವಲಿಂಗೇಗೌಡ, ವೆಂಕಟರಾವ್ ನಾಡಗೌಡ ಮತ್ತಿತರರು, ನೀವು ಅತ್ಯಂತ ಹಿರಿಯರು, ನಿಮ್ಮ ಅನುಭವ ಸದನಕ್ಕೆ ಅತ್ಯಂತ ಮುಖ್ಯ. ಮತ್ತೆ ಚುನಾವಣೆಗೆ ನಿಲ್ಲಬೇಕು. ಚುನ್ನಾವಣೆಗೆ ನಿಲ್ಲುವುದಿಲ್ಲ ಎಂಬ ನಿಮ್ಮ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಒತ್ತಾಯಿಸಿದರು.
ವಿರೋಧ ಪಕ್ಷದವರು, ಬಿಜೆಪಿ ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡಿದೆ. ಅವರನ್ನು ಕಡೆಗಣಿಸಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ಬಿಜೆಪಿಯಾಗಲಿ ನನ್ನನ್ನು ಎಂದೂ ಕಡೆಗಣಿಸಿಲ್ಲ. ಎಲ್ಲರೂ ಮೆಚ್ಚುವ ರೀತಿಯಲ್ಲಿ ಹಲವು ಉತ್ತಮ ಅವಕಾಶಗಳನ್ನು ಪಕ್ಷ ನನಗೆ ನೀಡಿದೆ. ಪಕ್ಷ ಕೊಟ್ಟ ಅವಕಾಶದಿಂದಾಗಿ ನನ್ನ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನನಗೆ ಸಿಕ್ಕಿದಷ್ಟು ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ.
ಅಧಿವೇಶನ ಮುಗಿದ ನಂತರ ಪ್ರವಾಸ:ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನರೇಂದ್ರ ಮೋದಿ ಅವರು ನನಗೆ ಕೊಟ್ಟ ಗೌರವ, ಸ್ಥಾನಮಾನಕ್ಕೆ ನನ್ನ ಕೊನೆ ಉಸಿರು ಇರುವವರೆಗೂ ಬಿಜೆಪಿ ಕಟ್ಟಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೇವರು ಶಕ್ತಿ ಕೊಟ್ಟರೆ ಈ ಚುನಾವಣೆಯಲ್ಲಿ ಅಲ್ಲದೆ, ಮುಂದಿನ ಚುನಾವಣೆಯಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಈ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯದ 224 ಕ್ಷೇತ್ರ ಸೇರಿದಂತೆ ಎಲ್ಲೆಡೆ ಪ್ರಚಾರ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಘೋಷಿಸಿದರು.
ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ: ಯಡಿಯೂರಪ್ಪ ಅವರು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಅಧಿವೇಶನ ಮುಗಿದ ನಂತರ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಜನರಿಗೆ ನಮ್ಮ ಸರ್ಕಾರ ಕೊಟ್ಟ ಯೋಜನೆಗಳು ಏನು ಎಂಬುದನ್ನು ತಿಳಿಸಬೇಕು. ಯಾವುದೇ ಸರ್ಕಾರ ಕೊಡದಷ್ಟು ಯೋಜನೆಗಳನ್ನು ನಮ್ಮ ಬಿಜೆಪಿ ಸರ್ಕಾರ ಕೊಟ್ಟಿದೆ ಎಂಬುದನ್ನು ಜನರಿಗೆ ಹೇಳಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಹಾಗೆಯೇ ಕಾಂಗ್ರೆಸ್ನವರು ಅದೇ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.