ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸವಾಲು ಸ್ವೀಕರಿಸಿದ್ದು, ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಸಿದ್ಧನಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಮಾತಮಾಡಿದ ಅವರು, ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚೆ ಮಾಡೋಣ ಎಂದರು.
ಕುಮಾರಸ್ವಾಮಿ ಅವರು ನನ್ನ ಸವಾಲು ಸ್ವೀಕರಿಸಿರುವುದು ಬಹಳ ಸಂತೋಷ. ಅವರ ಪ್ರತೀ ಸವಾಲನ್ನೂ ನಾನು ಸ್ವೀಕರಿಸುತ್ತೇನೆ. ನಮ್ಮ ಚರ್ಚೆ ಯಾವುದೋ ಒಂದು ಚಾನೆಲ್ನಲ್ಲಿ ಆಗೋದು ಬೇಡ. ಎಲ್ಲಾ ಸುದ್ದಿ ವಾಹಿನಿಗಳಿಗೂ ಸಿಗುವಂತೆ ಅಧಿವೇಶನದಲ್ಲೇ ಮಾಡೋಣ. ಯಾರು ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಅಧಿವೇಶನದಲ್ಲಿ ಬಿಚ್ಚಿಡೋಣ. ಅವರ ಬಳಿ ಇರುವ ಸರಕುಗಳನ್ನು ತಂದು ಅವರು ಮಾತನಾಡಲಿ. ನನ್ನ ಬಳಿ ಇರುವ ದಾಖಲೆಗಳನ್ನು ಮುಂದಿಟ್ಟು ನಾನು ಮಾತನಾಡುತ್ತೇನೆ ಎಂದು ತಿಳಿಸಿದರು. ಈ ಹಿಂದೆಯೂ ಹಲವಾರು ಬಾರಿ ನಾನು ಇಂತಹ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿ, ಉತ್ತರ ಕೊಟ್ಟಿದ್ದೇನೆ. ನಂತರ ನನ್ನ ಬಳಿ ಬಂದು ಕ್ಷಮೆ ಕೇಳಿದ್ದನ್ನೂ ನೋಡಿದ್ದೇವೆ ಎಂದರು.
ವಿಧಾನಸೌಧ ಕಚೇರಿ ನವೀಕರಣ ಅಗತ್ಯತೆಯ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗೆ ಸಾಮಾನ್ಯ ಜ್ಞಾನ ಇಲ್ಲ. ಅದು ನನ್ನ ಕಚೇರಿ. ನಾನು ಅಲ್ಲಿ ಅನೇಕ ಜನರು, ಗಣ್ಯರನ್ನು ಭೇಟಿ ಮಾಡಬೇಕಾಗುತ್ತದೆ. ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿಗಳು ವಿಧಾನಸೌಧಕ್ಕೆ ಬಂದಾಗ ನಾನು ಎಂ.ಬಿ.ಪಾಟೀಲ್ ಅವರ ಕೊಠಡಿಗೆ ಹೋಗಿ ಅವರನ್ನು ಭೇಟಿ ಮಾಡಬೇಕಾಯಿತು. ಗಣ್ಯರು ಭೇಟಿಗೆ ಬಂದಾಗ ಅವರಿಗೆ ಗೌರವ ನೀಡಲು ಅಚ್ಚುಕಟ್ಟಾದ ಕೊಠಡಿ, ಸೂಕ್ತ ಸ್ಥಳಾವಕಾಶ ಇರಬೇಕು. ನಾವು ನಮ್ಮ ಮಣ್ಣಿನ ಸಂಸ್ಕೃತಿಯನ್ನು ನಾವು ಪಾಲಿಸಬೇಕು. ನಾವು ಬೆಂಗಳೂರು ಹಾಗೂ ಇಂಡಿಯಾವನ್ನು ಉತ್ತಮವಾಗಿ ಬಿಂಬಿಸಬೇಕು. ಅದಕ್ಕಾಗಿ ಮಾಡುತ್ತಿದ್ದೇವೆ. ಬಿಜೆಪಿ ಅವರಿಗೆ ಈ ಬಗ್ಗೆ ಕಾಮನ್ ಸೆನ್ಸ್ ಇಲ್ಲ ಎಂದು ತಿರುಗೇಟು ಕೊಟ್ಟರು.
ಏನಿದು ವಿವಾದ?: ರಾಮನಗರ ಜಿಲ್ಲೆಯನ್ನು ಮರುನಾಮಕರಣ ಮಾಡುವ ಕುರಿತು ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ. ಈ ಉದ್ದೇಶದ ಹಿಂದೆ ರಿಯಲ್ ಎಸ್ಟೇಟ್ ಲಾಭದ ಲೆಕ್ಕಾಚಾರಗಳಿವೆ ಎಂದು ಬಿಜೆಪಿ ಆರೋಪಿಸಿದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂಓದಿ:ವಶಕ್ಕೆ ಪಡೆದುಕೊಂಡಿರುವ ಉಗುರಿನ ಪೆಂಡೆಂಟ್ ಎಫ್ಎಸ್ಎಲ್ಗೆ ಕಳುಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳು