ಬೆಂಗಳೂರು: ರಾಜ್ಯ ಹಾಗೂ ಮಹಾನಗರದ ಕೆಲವೆಡೆ ಇಂದಿರಾ ಕ್ಯಾಂಟೀನ್ ಮುಚ್ಚಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದು ಗುಣಮಟ್ಟದ ತಿಂಡಿ-ಊಟ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ತಪ್ಪಿದ್ದಲ್ಲಿ ತಾವೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ಗಳ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ಗಳಿಗೆ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಒಂದು ನೆಪ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ದುರುದ್ದೇಶದಿಂದ ಕ್ಯಾಂಟೀನ್ ತಿಂಡಿ-ಊಟದ ಗುಣಮಟ್ಟವನ್ನು ಕೆಡಿಸುತ್ತಿದೆ. ಇದರ ಜೊತೆಗೆ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ.
ನಮ್ಮ ಸರ್ಕಾರ ಬೆಂಗಳೂರು ನಗರದ ಎಲ್ಲ 198 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿತ್ತು. ಅವುಗಳಲ್ಲೀಗ 40 ಕ್ಯಾಂಟಿನ್ಗಳು ಮುಚ್ಚಿವೆ. ಬೆಂಗಳೂರು ನಗರವೂ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿನ ಕ್ಯಾಂಟೀನ್‌ಗಳನ್ನು ಕೂಡಾ ಒಂದೊಂದಾಗಿ ಮುಚ್ಚಲಾಗುತ್ತಿದೆ. ಕ್ಯಾಂಟೀನ್ ಗುತ್ತಿಗೆಯ ನವೀಕರಣಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಕಳೆದ ಆರು ತಿಂಗಳುಗಳಿಂದ ಬಿಬಿಎಂಪಿಗೆ ಕ್ಯಾಂಟೀನ್ ವೆಚ್ಚದ ಸಹಾಯಧನವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಯಾವುದೇ ಕ್ಷಣದಲ್ಲಿ ಉಳಿದ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ನಿಲ್ಲಿಸಬಹುದು.
ನಾವು ಇಂದಿರಾ ಕ್ಯಾಂಟೀನ್ಗಾಗಿ 2017-18ರಲ್ಲಿ ರೂ. 100 ಕೋಟಿ ಮತ್ತು 2018-19ರಲ್ಲಿ ರೂ.145 ಕೋಟಿಗಳನ್ನು ಬಜೆಟ್ನಲ್ಲಿ ನೀಡಿದ್ದೆವು. 2022-23ರ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಹಣ ನೀಡದೆ ಖರ್ಚಿನ ಭಾರವನ್ನು ಬಿಬಿಎಂಪಿ ತಲೆ ಮೇಲೆ ಹೊರಿಸಿರುವುದೇ ಈಗಿನ ಹಣದ ಕೊರತೆಗೆ ಕಾರಣ. ಬೆಲೆ ಏರಿಕೆಯಿಂದಾಗಿ ಬೆಂಗಳೂರು ಮಹಾನಗರದಲ್ಲಿ ಒಂದು ಊಟಕ್ಕೆ ಇಂದು 50-60 ರೂಪಾಯಿ ನೀಡಬೇಕಾಗಿದೆ. ನಗರದ ಬಡವರು ಮತ್ತು ಬೇರೆ ಊರುಗಳಿಂದ ಬಂದವರಿಗೆ ಅಕ್ಷಯಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಿ ಅವರ ಶಾಪಕ್ಕೆ ಯಾಕೆ ತುತ್ತಾಗುತ್ತೀರಿ ರಾಜ್ಯ ಬಿಜೆಪಿ? ಎಂದು ಸಿದ್ದರಾಮಯ್ಯ ಟ್ವೀಟ್‌ಗಳ ಮೂಲಕ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಹಾವೇರಿ: ಇಂದಿರಾ ಕ್ಯಾಂಟೀನ್ ಪುನಾರಂಭಿಸುವಂತೆ ಸ್ಥಳೀಯರ ಆಗ್ರಹ