ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಬಾಕಿ ಇರುವ ಪಿಂಚಣಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಸಿಎಂ, ತಕ್ಷಣ ಪಿಂಚಣಿ ಹಣ ಬಿಡುಗಡೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಡದಿ ಟೊಯೋಟಾ ಕಾರ್ಖಾನೆ ಲಾಕ್‌ಔಟ್: ಯಡಿಯೂರಪ್ಪ ನೆರವು ಕೋರಿದ ಕಂಪನಿ ಉಪಾಧ್ಯಕ್ಷ
ಇದಕ್ಕೂ ಮುನ್ನ ರವೀಂದ್ರ ಶ್ರೀಕಂಠಯ್ಯ ವಿಷಯ ಪ್ರಸ್ತಾಪಿಸಿ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯನ್ನು ಪಡೆಯುತ್ತಿರುವ ವೃದ್ಧರು ಹಾಗೂ ಮಹಿಳೆಯರಿಗೆ ಸಮರ್ಪಕವಾಗಿ ಹಾಗೂ ನಿಗದಿತ ಸಮಯದಲ್ಲಿ ಪಿಂಚಣಿ ನೀಡುವಂತೆ ಒತ್ತಾಯಿಸಿದರು. ಸಾಮಾಜಿಕ ಭದ್ರತೆ ಯೋಜನೆಯಡಿ ಸುಮಾರು ಆರು ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಬಾಕಿ ಉಳಿದುಕೊಂಡಿರುವುದಾಗಿ ಗಮನ ಸೆಳೆದರು.
ಇತ್ತ ಸ್ಪೀಕರ್ ಕಾಗೇರಿ ಕೂಡ ಪಿಂಚಣಿ ಕೊಡದ ಅಧಿಕಾರಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಸಿಎಂ ಯಡಿಯೂರಪ್ಪ ಹಾಗೂ ಸಚಿವರಿಗೆ ಸೂಚಿಸಿದರು.
ಇದೇ ವೇಳೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹೊಸದಾಗಿ ಕೊಡುತ್ತಿರುವ ಪಿಂಚಣಿ ಅಲ್ಲ ಇದು. ಅನೇಕ ವರ್ಷಗಳಿಂದ ಕೊಡುತ್ತಿರುವ ಪಿಂಚಣಿಯಾಗಿದೆ. ಯಾಕೆ ಪಿಂಚಣಿ ಕೊಡಲು ನಿಮ್ಮ ಬಳಿ ಹಣ ಇಲ್ಲವೇ ಎಂದು ಪ್ರಶ್ನಿಸಿದರು.