ಕರ್ನಾಟಕ

karnataka

ETV Bharat / state

ಇನ್ಮುಂದೆ ಮನೆಯಲ್ಲಿ ಕೂರಲ್ಲ, ಮತ್ತೆ ರಾಜ್ಯದ ಉದ್ದಗಲ ಪ್ರವಾಸ, ಹೋರಾಟ ಆರಂಭಿಸುತ್ತೇನೆ: ಯಡಿಯೂರಪ್ಪ ಘೋಷಣೆ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಳೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

By ETV Bharat Karnataka Team

Published : Sep 7, 2023, 4:58 PM IST

Updated : Sep 8, 2023, 3:53 PM IST

ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಮತ್ತೆ ರಾಜ್ಯದ ಉದ್ದಗಲ ಪ್ರವಾಸ, ಹೋರಾಟ ಆರಂಭಿಸುತ್ತೇನೆ; ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಪ್ರವಾಸ, ಹೋರಾಟ ಆರಂಭಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ 22 - 23 ಸ್ಥಾನ ಗೆಲ್ಲಲು ಬೇಕಾದ ಎಲ್ಲ ಪ್ರಯತ್ನ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಯಡಿಯೂರಪ್ಪ ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ. ರಾಜ್ಯದ ಉದ್ದಗಲಕ್ಕೆ ಮತ್ತೆ ಓಡಾಟ ಮಾಡುತ್ತೇನೆ. ಹೋರಾಟ ಮಾಡುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 22-23 ಸ್ಥಾನ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಏನೇನು ಪ್ರಯತ್ನ ಬೇಕೋ ಅದನ್ನು ಮಾಡುತ್ತೇನೆ. ನನ್ನ ಪ್ರವಾಸ ಮೂರ್ನಾಲ್ಕು ದಿನದಲ್ಲಿ ಆರಂಭವಾಗಲಿದೆ. ಮತ್ತೆ ರಾಜ್ಯ ರಾಜಕೀಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪಕ್ಷವನ್ನು ಸದೃಢಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸರ್ಕಾರದ ಆಡಳಿತ ವೈಖರಿ ವಿಫಲವಾಗಿದ್ದು, ಕಾಂಗ್ರೆಸ್ ನಾಯಕರು ಜನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಬರಗಾಲ ತಾಂಡವವಾಡುತ್ತಿದೆ. ವಿದ್ಯುತ್​ ಕಣ್ಣಾಮುಚ್ಚಾಲೆ ಆಡುತ್ತಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದನ್ನು ಖಂಡಿಸಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಳೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಬರಗಾಲದಿಂದಾಗಿ ದನ ಕರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ. ಜನ ಕಂಗಾಲಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ಬರಗಾಲ ಘೋಷಣೆಗೆ ಹಿಂದೆ ಮುಂದೆ ನೋಡುತ್ತಿದೆ. ನಮ್ಮ ಜಲಾಶಯದಲ್ಲಿ ನೀರಿಲ್ಲದಿದ್ದರೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ನೀರು ಹರಿಸುವುದು ನಿಲ್ಲಿಸಿಲ್ಲ. ಸುಪ್ರೀಂ ಕೋರ್ಟ್​ನಲ್ಲಿ ವಾದ ಮಾಡುವಲ್ಲಿಯೂ ವಿಫಲವಾಗಿದೆ.

ವಿದ್ಯುತ್ ಬಿಲ್ ಹೆಚ್ಚಾಗಿದೆ. ಮೊದಲು ಸಾಮಾನ್ಯ ಜನ ಕೊಡುತ್ತಿದ್ದ ದರಕ್ಕಿಂತ ಎರಡು ಪಟ್ಟಾಗಿದೆ. ಹಾಲಿನ ದರ ಹೆಚ್ಚಾಗಿದೆ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಗುತ್ತಿಗೆದಾರರು ಹಿಂದಿನ ಸರ್ಕಾರದ ಕಾಮಗಾರಿ ಮುಗಿಸಿ ಬಿಲ್ ಗೆ ಕಾಯುತ್ತಿದ್ದರೂ ಅದಕ್ಕೆ ಕಮೀಷನ್ ಕೇಳಲಾಗುತ್ತಿದೆ. ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ನಾವು ರೈತರಿಗೆ ನೀಡುತ್ತಿದ್ದ 4 ಸಾವಿರ ಹಣ ನಿಲ್ಲಿಸಿದ್ದಾರೆ. ಎನ್ಇಪಿ ರದ್ದು ಮಾಡಿದ್ದಾರೆ. ನಮ್ಮ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ತೊಡಗಿರುವವರ ಮೇಲೆ ಕೇಸ್ ಹಾಕುತ್ತಿದ್ದಾರೆ. ಇದನ್ನು ಖಂಡಿಸಿ ನಾಳೆ 15-20 ಸಾವಿರ ಜನ ಸೇರಿಸಿ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ.

ಇದು ಹೋರಾಟದ ಆರಂಭ ಮಾತ್ರ- ಬಿಎಸ್​ವೈ:ನಮ್ಮೆಲ್ಲಾ ಮುಖಂಡರು ಇದರಲ್ಲಿ ಭಾಗಿಯಾಗಲಿದ್ದಾರೆ. ಸಾಕಷ್ಟು ಸಮಯ ಕೊಟ್ಟರೂ ಸರ್ಕಾರ ಅಭಿವೃದ್ಧಿ ಕಾರ್ಯದತ್ತ ಗಮನ ಕೊಡದೇ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಹಾಗಾಗಿ, ನಾವು ಅನಿವಾರ್ಯವಾಗಿ ಬೀದಿಗಿಳಿಯುತ್ತಿದ್ದೇವೆ. ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಪ್ರಾರಂಭ ಮಾತ್ರ. ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಿ ಮುಂದೆ ಹೋರಾಟ ಯಾವ ಸ್ವರೂಪಕ್ಕೆ ಹೋಗಲಿದೆ ಎಂದು ಗೊತ್ತಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.

ಕಾವೇರಿ ಇರಬಹುದು ಅಥವಾ ಬೇರೆ ಯಾವುದೇ ವಿಚಾರ ಇರಬಹುದು, ರಾಜ್ಯದ ಪರವಾಗಿ ನಾವು ಕೇಂದ್ರಕ್ಕೆ ಒತ್ತಡ ಹಾಕಿಯೇ ಹಾಕುತ್ತೇವೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲಿಯೂ ವಿಫಲವಾಗಿದೆ. ಹಾಗಾಗಿ, ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಸಚಿವರದ್ದು ಬೇಜವಾಬ್ದಾರಿಯುತ ಹೇಳಿಕೆ:ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದು ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಇಂತಹ ಹೇಳಿಕೆ ಸಚಿವರಿಗೆ ಶೋಭೆ ತರಲ್ಲ. ಈ ಹೇಳಿಕೆಯನ್ನು ಖಂಡಿಸುತ್ತೇನೆ. ಅವರು ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವರ ಹೇಳಿಕೆಗೆ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪ ಜೈಲಿಗೆ ಹೋಗಲು ಬಿಜೆಪಿಯವರೇ ಕಾರಣ ಎನ್ನುವ ರೇಣುಕಾಚಾರ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಈಗಾಗಲೇ ನಾನು ಈ ಸಂಬಂಧ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ. ಯಾರು ಯಾವುದಕ್ಕೂ ಕಾರಣರಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಪಕ್ಷ ಕಟ್ಟಬೇಕಿದೆ. ಪಕ್ಷವನ್ನು ಬೆಳೆಸಬೇಕಿದೆ. ಆ ಕಡೆ ಹೆಚ್ಚು ಗಮನವನ್ನು ಕೊಡಬೇಕು. ಆ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಆಪರೇಷನ್ ಹಸ್ತ ಸಫಲವಾಗಲ್ಲ. ನಮ್ಮ ಯಾವುದೇ ಶಾಸಕರೂ ಬಿಜೆಪಿಯನ್ನು ಬಿಡುವುದಿಲ್ಲ. ನಾನು ಈಗಾಗಲೇ ನಮ್ಮ ಎಲ್ಲ ಶಾಸಕರ ಜೊತೆ ಮಾತನಾಡಿದ್ದೇನೆ. ಯಾರೂ ಕಾಂಗ್ರೆಸ್​ಗೆ ಹೋಗಲ್ಲ. ಎಲ್ಲರೂ ನಾಳಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಎಸ್​ವೈ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಇಲ್ಲ ಎನ್ನುವ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ನಮ್ಮ ಕೆಲಸ ಕಾರ್ಯ ಮಾಡುತ್ತಿದ್ದೇವೆ. ಇಂದು ನಾಳೆಯಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಮಾಡುತ್ತಾರೆ. ಆ ಕಡೆ ಗಮನ ಕೊಡುತ್ತಿದ್ದೇವೆ ಎಂದು ಅತಿ ಶೀಘ್ರದಲ್ಲೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗುವ ಕುರಿತು ಸುಳಿವು ನೀಡಿದರು.

ಇದನ್ನೂ ಓದಿ:ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ವಿರುದ್ಧ ಆಗಸ್ಟ್ 23ಕ್ಕೆ ಬಿಜೆಪಿ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

Last Updated : Sep 8, 2023, 3:53 PM IST

ABOUT THE AUTHOR

...view details