ಬೆಂಗಳೂರು: ಬಿಜೆಪಿ ಬಿಡುವ ಸ್ಥಿತಿ ಬಂದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಮರಳಿ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಶಾಸಕ ಬೈರತಿ ಬಸವರಾಜ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಹೋಗಲ್ಲ. ಯಾರೋ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಯಾವ ಕಾರಣಕ್ಕೂ ನಾನು ಪಕ್ಷ ಬಿಡಲ್ಲ. ಪಕ್ಷ ಬಿಡುವ ಸಂದರ್ಭ ಬಂದರೆ ನಾನು ನಿವೃತ್ತಿ ಆಗಿ ಮನೆಯಲ್ಲಿ ಇರುತ್ತೇನೆಯೇ ಹೊರತು ಕಾಂಗ್ರೆಸ್ ಪಕ್ಷ ಸೇರಲ್ಲ. ನನಗೆ ಕಾಂಗ್ರೆಸ್ನಿಂದ ಯಾವುದೇ ಆಹ್ವಾನ ಬಂದಿಲ್ಲ. ನನ್ನನ್ನು ಆ ಪಕ್ಷದಿಂದ ಯಾರೂ ಸಂಪರ್ಕಿಸಿಲ್ಲ. ನಾನೂ ಸಹ ಆ ಪಕ್ಷವನ್ನು ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ, ಮಾನ, ಗೌರವ ಎಲ್ಲವೂ ಸಿಕ್ಕಿದೆ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಬಿಜೆಪಿ ಕಾರ್ಯಕರ್ತನಾಗಿ ಇರುತ್ತೇನೆ. ಎಸ್ಟಿ ಸೋಮಶೇಖರ್ ಅವರೂ ಪಕ್ಷ ಬಿಡಲ್ಲ ಅಂದಿದ್ದಾರೆ. ನಾನೂ ಕೂಡಾ ಸೋಮಶೇಖರ್ ಜತೆ ಮಾತಾಡಿದ್ದೇನೆ. ನಮ್ಮೆಲ್ಲರ ವಿಚಾರದಲ್ಲಿ ಗೊಂದಲ ಸೃಷ್ಟಿ ಆಗಿದೆ. ಈ ಗೊಂದಲ ಬಗೆಹರಿಯುವ ಕೆಲಸ ಆಗಬೇಕಿದೆ ಎಂದರು. ಇದಕ್ಕೆ ದನಿಗೂಡಿಸಿದ ಮಾಜಿ ಡಿಸಿಎಂ ಆರ್ ಅಶೋಕ್, ಬಹಳ ಜನ ನಮ್ಮ ಪಕ್ಷ ಬಿಟ್ಟು ಹೋಗುತ್ತಾರೆ ಅಂತ ವದಂತಿ ಹಬ್ಬಿಸಿದ್ದಾರೆ. ಬೈರತಿ ಬಸವರಾಜ್ ಸಹ ಹೋಗುತ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬೈರತಿ ಬಸವರಾಜ್ ಅವರು ಬಿಜೆಪಿ ಬಿಟ್ಟು ಹೋಗಲ್ಲ. ಅಷ್ಟೇ ಅಲ್ಲ ಸೋಮಶೇಖರ್ ಸಹ ಹೋಗಲ್ಲ ಎಂದು ಹೇಳಿದರು.