ಬೆಂಗಳೂರು: "ಸಿಎಂ ಪದವಿ ಬಗ್ಗೆ ಇನ್ಮುಂದೆ ನಾನು ಉತ್ತರ ಕೊಡಲ್ಲ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರದಲ್ಲಿ ಮಾತನಾಡಿದ ಅವರು, "ಸಿಎಂ ಪದವಿ ವಿಚಾರವಾಗಿ ನನಗೆ ದಯಮಾಡಿ ಪ್ರಶ್ನೆ ಕೇಳಬೇಡಿ. ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಎಷ್ಟು ಸರಿ ಹೇಳಬೇಕು, ನನ್ನ ಹೆಸರು ಹೇಳುತ್ತಿರುತ್ತಾರೆ. ನನ್ನ ಹೆಸರು ಹೇಳಿದರೆ ಏನು ಮಾಡೋಕೆ ಆಗುತ್ತೆ. ನನ್ನ ಬಗ್ಗೆ ಮಾತಾಡಬೇಡಿ ಎಂದು ಹೇಳುತ್ತೇನೆ, ಆದರೂ ಮಾತನಾಡುತ್ತಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಸಿಎಂ, ಡಿಸಿಎಂ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲು ಕರೆದಿದ್ದಾರೆ. ಅದನ್ನು ಬಿಟ್ಟು ಬೇರೆ ಅಜೆಂಡಾ ಇದ್ದಂತಿಲ್ಲ. ನಿಗದಿತ ಸಮಯದಲ್ಲಿ ಜಿಲ್ಲೆಗಳಲ್ಲಿ ಸಭೆ ಮಾಡಬೇಕು. ನನಗೆ ಬೆಂಗಳೂರು ಉತ್ತರಕ್ಕೆ ಹಾಕಿದ್ದಾರೆ. ನಾನು ಇನ್ನೂ ಸಭೆ ಮಾಡಿಲ್ಲ. ದಿನಾಂಕ ನಿಗದಿ ಮಾಡಿಕೊಂಡು ಸಭೆ ಮಾಡ್ತೇವೆ. ನಮಗೆಲ್ಲ ಸಮಯ ಕೊಟ್ಟಿದ್ದಾರೆ. ಅಷ್ಟರಲ್ಲಿ ಕೆಲಸ ಮಾಡ್ತೇವೆ" ಎಂದರು.
ಸಚಿವರುಗಳು ಮಾತನಾಡುವ ಹಾಗಿಲ್ಲ:ಇನ್ನೊಂದೆಡೆ ಸಿಎಂ ನಡೆಸಿದ ಬ್ರೇಕ್ಫಾಸ್ಟ್ ಸಭೆ ಬಳಿಕಮಾತನಾಡಿದ ಸಚಿವ ಬೈರತಿ ಸುರೇಶ್, "ಸಭೆಯಲ್ಲಿ ರಾಜ್ಯದ ಜನರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಲು ಸೂಚನೆ ನೀಡಿದ್ದಾರೆ. ಕುಡಿಯುವ ನೀರು ಸಮಸ್ಯೆ ಆಗಬಾರದು ಎಂದು ಸಿಎಂ ಸೂಚಿಸಿದ್ದಾರೆ. ಬಹಿರಂಗ ಹೇಳಿಕೆ ನೀಡುವ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಹೈಕಮಾಂಡ್ ಬಹಿರಂಗ ಹೇಳಿಕೆ ನೀಡಬಾರದು ಎಂದು ಈಗಾಗಲೇ ಸೂಚನೆ ನೀಡಿದೆ. ಯಾವುದೇ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಮಾತನಾಡುತ್ತಾರೆ. ಸಚಿವರುಗಳು ಮಾತನಾಡುವುದಿಲ್ಲ" ಎಂದರು.
"ಕೆಲ ಸಚಿವರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದಿದ್ದರಿಂದ ಸಭೆಗೆ ಕೆಲವರಿಗೆ ಬರಲು ಆಗಿಲ್ಲ. ಸತೀಶ್ ಜಾರಕಿಹೊಳಿಗೆ ಅನಾರೋಗ್ಯದ ಕಾರಣ ಸಭೆಗೆ ಬಂದಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರಿಂದ ಬರಲು ಆಗಿಲ್ಲ. ಎಲ್ಲಾ ಸಚಿವರುಗಳಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ಸಭೆಗೆ ಬಾರದೇ ಇರುವವರು ಇಂದು ಮಧ್ಯಾಹ್ನದ ಬಳಿಕ ಸಿಎಂ ಅವರನ್ನು ಭೇಟಿಯಾಗುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ಗೆ ಗೈರು: ಸಚಿವ ಸತೀಶ ಜಾರಕಿಹೊಳಿ ಹೇಳಿದ್ದೇನು?