ಕರ್ನಾಟಕ

karnataka

ETV Bharat / state

ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ನಾನು ಕೋರ್ಟ್​ಗೆ ಹೋಗುತ್ತೇನೆ: ಸಿಎಂ ಇಬ್ರಾಹಿಂ - ಸಿ ಎಂ ಇಬ್ರಾಹಿಂ

CM Ibrahim counter Against JDS: ನಾನು ನನ್ನ ಎಂಎಲ್​ಸಿ ಸ್ಥಾನ ಬಿಟ್ಟು ಬಂದು ಜೆಡಿಎಸ್​ ಸೇರಿಕೊಂಡಿದ್ದಕ್ಕೆ ಕೊಟ್ಟ ಶಿಕ್ಷೆನಾ ಇದು ದೇವೇಗೌಡರೇ ಎಂದು ಸಿ ಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

C M Ibrahim
ಸಿ ಎಂ ಇಬ್ರಾಹಿಂ

By ETV Bharat Karnataka Team

Published : Nov 20, 2023, 7:59 PM IST

ಬೆಂಗಳೂರು: ಜೆಡಿಎಸ್​ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು ತಪ್ಪು. ಹಾಗೂ ವಜಾಗೊಳಿಸಬೇಕೆಂದಿದ್ದರೆ ಸಭೆ ಕರೆದು 2/3 ಬೆಂಬಲದೊಂದಿಗೆ ಮಾಡಬೇಕು. ಯಾವುದೇ ನಿಯಮ ಪಾಲನೆ ಮಾಡದೇ ನನ್ನನ್ನು ಏಕಾಏಕಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ನಾನು ಕೋರ್ಟ್​ಗೆ ಹೋಗುತ್ತೇನೆ ಎಂದು ಹಿರಿಯ ರಾಜಕೀಯ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜೆಡಿಎಸ್​ನಿಂದ ಅಮಾನತು ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇನ್ನು ಏನು ಉಚ್ಚಾಟನೆ ರೀ, ಅವರೇ ಪಕ್ಷದಲ್ಲಿ ಇಲ್ಲ, ದೇವೇಗೌಡರ ಜೊತೆ ಯಾರು ಇದ್ದಾರೇ ರೀ? ದೇವೇಗೌಡರು ಪ್ರಧಾನಿಯಾಗಿದ್ದವರು. 70 ವರ್ಷದಿಂದ ರಾಜಕಾರಣ ಮಾಡ್ತಾ ಇದ್ದಾರೆ. ಪಕ್ಷವನ್ನು ನಡೆಸಿದವರು. ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಮೊದಲ ತಪ್ಪು. ನನ್ನನ್ನು ಅಮಾನತು ಮಾಡಿದ್ದು ಎರಡನೇ ತಪ್ಪು. ನೀವು ಬಿಜೆಪಿ ಜೊತೆ ಹೋಗೋದು ತಪ್ಪು ಅಂತ ಹೇಳಿದ್ದಕ್ಕೆ ಈ ಶಿಕ್ಷೆನಾ? ಮಗ ಕುಮಾರಸ್ವಾಮಿಯನ್ನು ತೆಗೆಯಬೇಕಿತ್ತು. ನಾನು ನಾಲ್ಕು ವರ್ಷಗಳಿಂದ ಇದ್ದ ಎಂಎಲ್ಸಿ ಸ್ಥಾನ ಬಿಟ್ಟು ಜೆಡಿಎಸ್​ಗೆ ಬಂದೆ. ಅದಕ್ಕೆ ಕೊಟ್ಟ ಶಿಕ್ಷೆನಾ ದೇವೇಗೌಡರೇ?. ಮಗನಿಗಾಗಿ ಇನ್ನು ಎಷ್ಟು ಜನರನ್ನು ಬಲಿ ಕೋಡ್ತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ 36 ಜನ ಬಂದಿದ್ದರು. ಅದರಲ್ಲಿ 28 ಜನ ಇವರ ಸಂಬಂಧಿಕರೇ ಇದ್ದರು. ಸಿ‌‌‌.ಕೆ.ನಾಣು ಅವರಿಗೆ ಅಧಿಕಾರ ಇಲ್ಲವೆಂದು ಯಾರು ಹೇಳಿದ್ದು? ನ.9 ಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದು ನಾನಲ್ಲ, ಜೆಡಿಎಸ್ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಕೆ. ನಾಣು. ನಾಣು ಅವರಿಗೆ ಪತ್ರ ಬರೆದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆಯಬಾರದು ಎಂದು ದೇವೇಗೌಡರು ಸೂಚಿಸಿದ್ದರು. ಆದರೂ ಇವರು ಸಭೆ ಮಾಡಿದರು ಎಂದು ವ್ಯಂಗ್ಯವಾಡಿದರು.

ಕೇರಳದ ತಿರುವನಂತಪುರದಲ್ಲಿ ನಡೆದ ಸಭೆಗೆ 12 ರಾಜ್ಯಗಳ ರಾಜ್ಯಾಧ್ಯಕ್ಷರು ಹೇಗೆ ಬಂದ್ರು? ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷನೇ, ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರುತ್ತಾರೋ, ಇಲ್ಲವೋ? ಡಿಸೆಂಬರ್ 9ಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಆಗುತ್ತದೆ. ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡೋಣ ಅಂತ ತೀರ್ಮಾನ ಮಾಡಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದರ ಕುರಿತು ನಮ್ಮನ್ನು ಕೇಳಿಲ್ಲ. ದೇವೇಗೌಡರು ಮಗನಿಗಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಈಗಲೂ ಮನವಿ ಮಾಡುತ್ತೇನೆ. ತಮ್ಮ ನಿರ್ಣಯವನ್ನು ವಾಪಸ್ ಪಡೆಯಿರಿ ಎಂದು ದಳಪತಿಗಳ ವಿರುದ್ಧ ಗುಡುಗಿದರು.

ವಿಜಯೇಂದ್ರ- ಅಶೋಕ್​ ಮುಂದೆ ಕೈಕಟ್ಟಿ ನಿಲ್ತಿರಾ?:ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ರಾಜ್ಯಾಧ್ಯಕ್ಷ, ಆರ್. ಅಶೋಕ್ ವಿರೋಧ ಪಕ್ಷದ ನಾಯಕ. ನಿಮಗೇನಿದೆ? ವಿಜೆಯೇಂದ್ರ, ಅಶೋಕ್ ಮುಂದೆ ಕೈಕಟ್ಟಿ ನಿಲ್ಲಬೇಕಾ ? ಯಾವ ಪರಿಸ್ಥಿತಿಗೆ ಬಂದಿದ್ದೇವೆ. ವಿಧಾನಸಭೆಯಲ್ಲಿ ನಮಗೆ ಸಂಖ್ಯೆ ಇಲ್ಲದೇ ಇರಬಹುದು. ಆದರೆ ನಮಗೆ ಸಿದ್ಧಾಂತ ಇದೆ. ಎರಡು ಸೀಟಿಗಾಗಿ ಅಮಿತ್​​ ಶಾ ಮನೆಗೆ ಹೋಗ್ತೀರಾ? ಡಿ.ವಿ. ಸದಾನಂದಗೌಡ ಹಾಗೂ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್​ನವರು ಬೇಕಾಗಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.

ಬಿಜೆಪಿ ಜೊತೆ ಬೆಳಗ್ಗೆ, ಕಾಂಗ್ರೆಸ್ ಜೊತೆ ಸಾಯಂಕಾಲ. ಸಂತೆ ವ್ಯಾಪಾರನಾ ಇದು. ನಿಮ್ಮನ್ನೇ ಕೇಳ್ತಿದೇನೆ ದೇವೇಗೌಡರೇ.., ಶಿವಕುಮಾರ್ ಅವರಿಗೆ ಬೆಂಬಲ ನೀಡುವುದಕ್ಕೆ ಪಕ್ಷದಲ್ಲಿ ನಿರ್ಣಯ ಮಾಡಿದ್ದೀರಾ?. ಶಿವಕುಮಾರ್ ಎನ್​ಡಿಎ ಬಿಟ್ಟು ಬನ್ನಿ ಅಂತ ಹೇಳಿದ್ದಾರೆ. ನಿಮ್ಮ ಜೊತೆ ಯಾರು ಉಳಿಯಲ್ಲ ಕಾದು ನೋಡಿ. ಆತ್ಮ ಶುದ್ಧವಾಗಿ ಇಟ್ಟುಕೊಳ್ಳಿ ಕುಮಾರಸ್ವಾಮಿ ಅವರೇ ಎಂದು ಮಾರ್ಮಿಕವಾಗಿ ನುಡಿದರು.

ಇವರಿಗೆ ಧೈರ್ಯ ಇದೆಯಾ? 19 ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿ, ಹೋಗಲಿ ನೀವೇ ರಾಜೀನಾಮೆ ನೀಡಿ. ದತ್ತಮಾಲೆ ಹಾಕಿ ಚನ್ನಪಟ್ಟಣದಲ್ಲಿ ಗೆದ್ದು ಬನ್ನಿ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ ಆರೋಪ ವಿಚಾರಕ್ಕೆ ಮಾತನಾಡಿ ಅವರು, ಆರೋಪ ಮಾಡಿದವರದ್ದು ಸಣ್ಣತನ. ಯತೀಂದ್ರ ಅವರ ಅಪ್ಪನ ಕ್ಷೇತ್ರ ನೋಡಿಕೊಳ್ತಿದ್ದಾನೆ. ಮೂರು ಶಾಲೆಗಳ ಬಗ್ಗೆ ಮಾತಾಡಿದ್ದಾರೆ. ನಿಮ್ಮ ಮಕ್ಕಳು ಏನು ಮಾಡಿದ್ರು‌ ದೇಶದ ಜನ ನೋಡಿಲ್ಲವೆ?. ಟಿ.ಎ. ಶರವಣ ಎಂಎಲ್​ಸಿ ಟಿಕೆಟ್​ಗಾಗಿ ಒಂದು ರೂಪಾಯಿ ತೆಗೆದುಕೊಂಡಿಲ್ಲ ಅಂತ ಹೇಳಲಿ. ನೀವು ಮಾಡಿ, ನಿಮಗೂ ಮಗ ಇದ್ದಾನೆ. ತಮ್ಮ ಮಗ ಬೆಳೆದ ರೀತಿ ಬೆಳೆಯಲಿ ಅಂತ ಬೆನ್ನು ತಟ್ಟುವುದು ಬಿಟ್ಟು, ಸೂಪರ್ ಸಿಎಂ, ಡಿಸಿಎಂ ಅಂತ ಹೇಳುವುದು ಸಣ್ಣತನದ ಪರಮಾವಧಿ ಎಂದು ಇಬ್ರಾಹಿಂ ಆರೋಪಿಸಿದರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಉದ್ದೇಶಕ್ಕೆ ಆಗಬಾರದು: ಗೃಹ ಸಚಿವ ಪರಮೇಶ್ವರ್​

ABOUT THE AUTHOR

...view details