ಬೆಂಗಳೂರು :ಯಡಿಯೂರಪ್ಪರನ್ನು ದೂರ ಇಟ್ಟು ಏನೂ ಮಾಡಲು ಸಾಧ್ಯವಿಲ್ಲ. ಬಸವರಾಜ್ ಬೊಮ್ಮಾಯಿಗೆ ಯಡಿಯೂರಪ್ಪರ ಬೆಂಬಲವೂ ಇದೆ. ಹಾಗಾಗಿ, ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿಯಾದ ಬಳಿಕ ಮಾತನಾಡಿದ ಅವರು, ಹೈಕಮಾಂಡ್ ಬೊಮ್ಮಾಯಿಗೆ ಆಶೀರ್ವಾದ ಮಾಡಿದ್ದಾರೆ. ಮಧ್ಯಂತರ ಚುನಾವಣೆಗೆ ಹೋಗಬೇಕೆಂಬ ಹಠ ಯಾರಿಗೂ ಇದ್ದಂತಿಲ್ಲ. ನಮಗೂ ಚುನಾವಣೆಗೆ ಹೋಗಬೇಕೆಂಬ ಆತುರ ಇಲ್ಲ. ಈ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನಾನು ಸಪೋರ್ಟ್ ಮಾಡುತ್ತೇನೆ. ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಆಸೆ ನಮಗೆ ಇಲ್ಲ. ಅವಧಿಗೂ ಮೊದಲೇ ಚುನಾವಣೆ ಬರಲ್ಲ ಎಂದು ತಿಳಿಸಿದರು.
ವಯಸ್ಸಿಗಿಂತ ಶ್ರದ್ಧೆ, ಹೋರಾಟದ ಕಿಚ್ಚು ಮುಖ್ಯ :ರಾಜಕಾರಣದಲ್ಲಿ ವಯಸ್ಸು ಮುಖ್ಯನಾ ಎಂಬ ಪ್ರಶ್ನೆಗೆ ಮಹಾಭಾರತದ ಪ್ರಸಂಗ ನೆನಪಿಸಿದ ಹೆಚ್‌ಡಿಡಿ, ವಯಸ್ಸಿಗಿಂತ ಹೆಚ್ಚಾಗಿ ಮನಸ್ಸಿನಲ್ಲಿ ಶ್ರದ್ಧೆ,ಹೋರಾಟದ ಕಿಚ್ಚು ಮುಖ್ಯ. ವಯಸ್ಸಾದರೂ ಹೋರಾಟ ಮನೋಭಾವನೆ ಇರಬೇಕು. ಭೀಷ್ಮನಿಗೆ ವಯಸ್ಸಾದರೂ 10 ದಿನ ಯುದ್ಧ ಮಾಡಿದ. ಕರ್ಣ ಒಂದು ದಿನ ಯುದ್ಧ ಮಾಡಿದ ಎಂದ ಅವರು, ರಾಜಕಾರಣಕ್ಕೂ ವಯಸ್ಸಿಗೂ ಸಂಬಂಧ ಇಲ್ಲ ಎಂದು ತಿಳಿಸಿದರು.
ಯಡಿಯೂರಪ್ಪರನ್ನು ತೆಗೆಯಬೇಕು ಅಂತಾ ನಾವೇನು ಹೇಳಿರಲಿಲ್ಲ. ಕೇಂದ್ರದ ಬಿಜೆಪಿ ನಾಯಕರು 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಿರಲಿಲ್ಲ. ಯಡಿಯೂರಪ್ಪ ವಿಚಾರದಲ್ಲಿ ಅದು ವಿಶೇಷ ಸಂದರ್ಭ. ಈಗ ಅವರಿಂದ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ. ಬಸವರಾಜ್ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ.
ಈ ಮೊದಲು ಯಡಿಯೂರಪ್ಪ, ಶೆಟ್ಟರ್, ಸದಾನಂದಗೌಡ ಅವಧಿಯಲ್ಲಿ ಸಚಿವರಾಗಿದ್ದಾರೆ. ಬಿಜೆಪಿಯಲ್ಲಿ ಅದಕ್ಕಿಂತಲೂ ಯಡಿಯೂರಪ್ಪ ಜೊತೆ ನಡೆದುಕೊಂಡ ರೀತಿ ನೋಡಿ ಕೊನೆಗೆ ಹೈಕಮಾಂಡ್ ಒಪ್ಪಿಕೊಂಡು ಅವಕಾಶ ನೀಡಿದೆ ಎಂದರು.