ಬೆಂಗಳೂರು:ರಾಜ್ಯಪಾಲರಿಂದ ವೋಟ್ ಆಫ್ ಕಾನ್ಫಿಡೆನ್ಸ್ ಬಗ್ಗೆ ಮಾಹಿತಿ ಬಂದಿದೆ. ಇಂದೇ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. ರಾಜ್ಯಪಾಲರು ಇದನ್ನ ನನ್ನ ಗಮನಕ್ಕೆ ತಂದಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸ್ಪೀಕರ್ ಹೇಳಿಕೆ ಬಳಿಕ ದೇಶಪಾಂಡೆ ಮಧ್ಯಪ್ರವೇಶಿಸಿದರು. ರಾಜ್ಯಪಾಲರು ಸ್ಪೀಕರ್ ಮೇಲೆ ಒತ್ತಡ ತರುವಂತಿಲ್ಲ. ಇಷ್ಟೇ ಸಮಯದಲ್ಲಿ ಮತ ಹಾಕಿ ಎಂದು ಹೇಳುವಂತಿಲ್ಲ. ಆರ್ಟಿಕಲ್ 175ರಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸಮತಯಾಚನೆ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದೆ. ಸದನದಲ್ಲಿ ಸದಸ್ಯರ ಅಭಿಪ್ರಾಯಕ್ಕೆ ಅವಕಾಶವಿದೆ. ಅಭಿಪ್ರಾಯ ವ್ಯಕ್ತಪಡಿಸಲು ಯಾರಿಗೂ ಅಡ್ಡಿಮಾಡುವಂತಿಲ್ಲ. ಸ್ಪೀಕರ್ಗೆ ಸಂಪೂರ್ಣ ಸ್ವಾಯತ್ತತೆ ಇದೆ. ರಾಜ್ಯಪಾಲರ ಮೇಲೆ ನಮಗೆ ಗೌರವವಿದೆ. ಹಾಗಂತ ಚರ್ಚೆ ಹತ್ತಿಕ್ಕುವ ಅವಕಾಶ ಯಾರಿಗೂ ಇಲ್ಲ ಎಂದರು.
ಈ ವೇಳೆ ಮಾತನಾಡಿದ ಸ್ಪೀಕರ್ ನಾನು ಯಾರ ಒತ್ತಡಕ್ಕೂ ಮಣಿಯುವವನಲ್ಲ. ನಾನು ನಿಮ್ಮ(ಸರ್ಕಾರ), ಅವರ(ಪ್ರತಿಪಕ್ಷ) ಒತ್ತಡಕ್ಕೂ ಮಣಿಯಲ್ಲವೆಂದು ಸ್ಪಷ್ಟಪಡಿಸಿದ್ರು .
ನಂತರ ಮಾತನಾಡಿದ ಯಡಿಯೂರಪ್ಪ ಇವತ್ತಿನ ಕಲಾಪ ಇವತ್ತೇ ಮುಗಿಸಿ. ನಾವು 12 ಗಂಟೆಯವರೆಗೆ ಕಾಯೋಕೆ ಸಿದ್ಧರಿದ್ದೇವೆ. ಇವತ್ತೇ ಮತ ಹಾಕಲು ಅವಕಾಶ ಕೊಡಿ ಎಂದು ಸ್ಪೀಕರ್ಗೆ ಮನವಿ ಮಾಡಿದ್ರು.