ಬೆಂಗಳೂರು: ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಮತ್ತೊಂದು ವಿಡಿಯೋ ಬಿಟ್ಟಿದ್ದು, ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ವಾಪಸ್ ಬರುವುದಾಗಿ ಹೇಳಿದ್ದಾನೆ.
ಇನ್ನೂ 24 ಗಂಟೆಗಳಲ್ಲಿ ಬರುವುದಾಗಿ ಹೇಳಿರುವ ಮನ್ಸೂರ್, ಒಂದು ಪಕ್ಷ ನಾನು ಬೆಂಗಳೂರಿಗೆ ಬಂದರೆ ಪೊಲೀಸರು ರಕ್ಷಣೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾನೆ. ಅನಾರೋಗ್ಯ ಕಾರಣದಿಂದ ತಾಯ್ನಾಡಿಗೆ ಬರಲು ಸಾಧ್ಯವಾಗಿಲ್ಲ. ಸದ್ಯ ನನ್ನ ಆರೋಗ್ಯ ಸುಧಾರಿಸಿದೆ. ಇನ್ನೊಂದು ದಿನದಲ್ಲಿ ಬೆಂಗಳೂರಿಗೆ ಬಂದು ಹೂಡಿಕೆದಾರರ ಹಣ ನೀಡುವೆ ಎಂದಿದ್ದಾನೆ.
ಮನ್ಸೂರ್ ಹರಿಬಿಟ್ಟಿರುವ ಏಳು ನಿಮಿಷದ ವಿಡಿಯೋದಲ್ಲಿ ತನ್ನ ಆರೋಗ್ಯ ಸಮಸ್ಯೆ ಬಗ್ಗೆ ಕಣ್ಣೀರು ಹಾಕಿದ್ದಾನೆ. ನನಗೆ ಹುಷಾರಿಲ್ಲದ ಕಾರಣ ಬೆಡ್ ರೆಸ್ಟ್ನಲ್ಲಿದೆ.ಈಗ ನಾನು ಗುಣಮುಖನಾಗಿರುವ ಕಾರಣ ವಿಡಿಯೋ ಮಾಡುತ್ತಿದ್ದೇನೆ. ನಾನು ಹಿಂದಿನ ವಿಡಿಯೋದಲ್ಲಿ ಆದಷ್ಟು ಬೇಗ ಭಾರತಕ್ಕೆ ಬರುತ್ತೇನೆ ಎಂದಿದ್ದೆ. ಆದರೆ ಡಯಾಬಿಟಿಸ್ ಹಾಗೂ ಕೆಲ ಆರೋಗ್ಯದ ಸಮಸ್ಯೆಯಿಂದ ಬೆಡ್ ರಸ್ಟ್ನಲ್ಲೇ ಇರಬೇಕಾಯ್ತು. ನಾನು ಇಂದು ಹೇಳುತ್ತಿದ್ದೇನೆ ಮುಂದಿನ 24 ಗಂಟೆಯೊಳಗೆ ನಾನು ಬರುತ್ತೇನೆ ಎಂದಿದ್ದಾನೆ.
ಮೊದಲನೆಯದಾಗಿ ನಾನು ಭಾರತ ಬಿಟ್ಟು ಹೋಗಿದ್ದು ದೊಡ್ಡ ತಪ್ಪು, ರಾಜಕಾರಣಿಗಳ ಒತ್ತಡದಿಂದ ನಾನು ಭಾರತವನ್ನ ಬಿಡಬೇಕಾಯ್ತು.ಈಗಲೂ ನನಗೆ ನನ್ನ ಫ್ಯಾಮಿಲಿ ಎಲ್ಲಿದೆ ಗೊತ್ತಿಲ್ಲ, ಹೇಗಿದ್ದಾರೆ ಗೊತ್ತಿಲ್ಲ. ನಾನು ಒಂದಷ್ಟು ಲಿಸ್ಟ್ ಮಾಡಿದ್ದೇನೆ ಯಾರಿಂದ ಹಣ ರಿಕವರಿ ಮಾಡಬಹುದು ಎಂದು. ಐಎಂಎ ಪ್ರಕರಣದ ತನಿಖೆಗೆ ಬೇಕಾಗುವ ಎಲ್ಲಾ ದಾಖಲೆಗಳನ್ನ ನಾನು ಅಧಿಕಾರಿಗಳಿಗೆ ಕೊಡುತ್ತೇನೆ. ನಾನು ಬರುತ್ತಿರುವುದು ಹಣ ವಾಪಾಸ್ ಕೊಡುವುದಕ್ಕಾಗಿ, ಅಧಿಕಾರಿಗಳಿಗಾಗಿ. ನಾನು ಬಂದಲ್ಲಿ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಅದರ ಹಣ ವಾಪಸ್ ಕೊಟ್ಟುಬಿಡಿ. ಯಾಕಂದ್ರೆ ನನ್ನ ಆರೋಗ್ಯ ಸರಿಯಿಲ್ಲ, ಅಲ್ಲದೆ ಕಾರ್ಡಿಯಕ್ ಆಪರೇಷನ್ ಆಗಬೇಕು. ನನಗೆ ಮೂರು ಬ್ಲಾಕ್ಗಳು ಆಗಿವೆ. ಹೀಗಾಗಿ ನನ್ನ ಆರೋಗ್ಯ ಹದಗೆಟ್ಟಿದೆ ಎಂದು ಹೇಳುತ್ತಿದ್ದಂತೆ ವಿಡಿಯೋ ಮಾಡುತ್ತಲೇ ಅತ್ತ ಮನ್ಸೂರ್ ಕಣ್ಣೀರು ಸುರಿಸಿದ್ದಾನೆ.
ಮನ್ಸೂರ್ ದುಬೈನಿಂದ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಮೇರೆಗೆ ಆರೋಪಿ ವಿರುದ್ಧ ಈಗಾಗಲೇ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಆತನ ಪಾಸ್ಪೋರ್ಟ್ ಜಪ್ತಿ ಮಾಡಿಕೊಳ್ಳಲಾಗಿದೆ. ಸಾಮಾನ್ಯ ಪ್ರಯಾಣಿಕನಾಗಿ ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬರಬಹುದು. ಆದ್ರೆ ಮನ್ಸೂರ್ ಬರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಎಸ್ಐಟಿ ಅಧಿಕಾರಿಗಳು.