ಬೆಂಗಳೂರು:ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಅದು ನಾನಲ್ಲ, ಗ್ರಾಫಿಕ್ಸ್ ಎಂದು ಯುವತಿಯೇ ಹೇಳಿದ್ದಾಳೆ. ನಾನು ಯಾರ ಹೆಸರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
'ಡಿ.ಕೆ.ಶಿವಕುಮಾರ್ ನನ್ನ ಹಳೆಯ ಗೆಳೆಯ'
ಎಫ್.ಐ.ಆರ್ ಹಾಗೂ ಯುವತಿಯ ಆಡಿಯೋ ವೈರಲ್ ಆಗಿರುವುದರ ಬಗ್ಗೆ ಮಾತನಾಡುತ್ತಾ, ಡಿ.ಕೆ. ಶಿವಕುಮಾರ್ ನನ್ನ ಹಳೆಯ ಗೆಳೆಯ, ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯಬೇಕು. ನನ್ನ ರೀತಿ ರಾಜೀನಾಮೆ ಕೊಡಬಾರದು. ರಾಜ್ಯದಲ್ಲಿ ಹೋರಾಟ ಮಾಡಬೇಕು. ನನ್ನ ಬಗ್ಗೆ ಡಿ.ಕೆ. ಶಿವಕುಮಾರ್ ಸಾಕಷ್ಟು ಮಾತನಾಡಿದ್ದಾರೆ. ಈಗ ಅದೆಲ್ಲಾ ಬೇಡ, ನಾನು ದೈವಭಕ್ತ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ 'ನನ್ನ ಮೇಲಿನ ಪ್ರಕರಣದ ತನಿಖೆಯಾಗಲಿ'
ನಾನು ನಿರಪರಾಧಿ, ಇದರಿಂದ ಹೊರಗೆ ಬರುವೆ. ನನ್ನ ವಿರುದ್ಧ ಎಫ್ಐಆರ್ ಹಾಕಲಿ, 302 ಹಾಕಲಿ, ಎಫ್ಐಆರ್ ದಾಖಲಾದ ತಕ್ಷಣ ಅಪರಾಧಿ ಅಲ್ಲ. ಮೊದಲು ನನ್ನ ಮೇಲಿನ ಎಫ್ಐ ಆರ್ ತನಿಖೆ ಆಗಬೇಕು. ನಂತರ ನಾನು ಕೊಟ್ಟಿರುವ ದೂರಿನ ಆಧಾರದ ಎಫ್ಐಆರ್ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥನಿದ್ದರೇ ಸ್ವತಃ ನಾನೇ ಶರಣಾಗುತ್ತೇನೆ ಎಂದರು.
'ನಾಳೆ ಸಂಜೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವೆ'
ಮುಂದುವರೆದು ಮಾಧ್ಯಮದವರ ಪ್ರಶ್ನೆಗಳಿಗೆ ತಮ್ಮ ಸ್ಪಷ್ಟೀಕರಣ ನೀಡುತ್ತಾ, ನಾನು ತಪ್ಪು ಮಾಡಿಲ್ಲ. ನಾನು ಜಾಮೀನು ಪಡೆಯುವುದಿಲ್ಲ. ಆ ಹೆಣ್ಣು ಮಗಳೇ ನಕಲಿ ಎಂದು ಹೇಳಿದ್ದಾಳೆ. ಇದು ಟ್ರೈಲರ್ ಎಂದು ಹೇಳಲ್ಲ, ಇನ್ನೂ ಸಾಕಷ್ಟು ಇದೆ. ನಾಳೆ ಸಂಜೆ ಇನ್ನಷ್ಟು ಮಾಹಿತಿ ಮಾಧ್ಯಮದ ಮತ್ತು ರಾಜ್ಯದ ಜನರ ಮುಂದೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಹೇಳಿಕೆಯ ಹಿನ್ನೆಲೆ:
ಸಿಡಿ ಪ್ರಕರಣ ಸಂಬಂಧ ವಕೀಲ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಯುವತಿ ಆಕೆಯ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಕರೆ ವೈರಲ್ ಆಗಿತ್ತು. ಮಾ.2 ರಂದು ಸಿಡಿಯಲ್ಲಿನ ವಿಡಿಯೋ ಬಹಿರಂಗವಾದ ದಿನದಂದೇ ಯುವತಿ ಪೋಷಕರೊಂದಿಗೆ 6.59 ನಿಮಿಷಗಳ ಕಾಲ ಮಾತನಾಡಿದ್ದಾಳೆ ಎನ್ನುವ ಆಡಿಯೋ ವೈರಲ್ ಆಗಿದ್ದು ,ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷದ ಪ್ರಭಾವಿ ನಾಯಕರ ಹೆಸರು ಪ್ರಸ್ತಾಪವಾಗಿತ್ತು.
ಇದನ್ನೂ ಓದಿ: ವಿಡಿಯೋ ಜೊತೆಜೊತೆಗೆ ಆಡಿಯೋ ಸರದಿ: ಯುವತಿಗಿದೆಯೇ ಪ್ರಭಾವಿ ನಾಯಕನ ಸಹಾಯ'ಹಸ್ತ'?
'ಮಾಧ್ಯಮಗಳಲ್ಲಿ ಬರುತ್ತಿರುವ ವಿಡಿಯೋ ನನ್ನದಲ್ಲ, ಅದು ಕೇವಲ ಗ್ರಾಫಿಕ್ಸ್ ಅಷ್ಟೇ, ನಾನು ಯಾಕೆ ಆ ತರಹ ಕೆಲಸ ಮಾಡಲಿ. ನನ್ನ ಜೊತೆ ಡಿ.ಕೆ. ಶಿವಕುಮಾರ್ ಕಡೆಯವರು ಇದ್ದಾರೆ. ಜಾರಕಿಹೊಳಿ ಜೊತೆ ಮಾತನಾಡುತ್ತಿರುವ ವಿಡಿಯೋ ಕರೆಯನ್ನು ಬದಲಾಯಿಸಲಾಗಿದೆ. ನಮ್ಮ ಮನೆಯವರು ಆಗಿರುವ ನೀವೇ ನಂಬದಿದ್ದರೆ ಹೇಗೆ? ನನ್ನ ಸ್ನೇಹಿತರು ನಂಬಿದ್ದಾರೆ. ದಯವಿಟ್ಟು ನಂಬಿ' ಎಂದು ಆಡಿಯೋ ಕರೆಯಲ್ಲಿ ಯುವತಿ ಹೇಳುತ್ತಾಳೆ.
'ನನ್ನ ಜೊತೆ ಆಕಾಶ್ ಇದ್ದಾನೆ. ಎಲ್ಲವೂ ಕ್ಲಿಯರ್ ಮಾಡಿಕೊಂಡು ಊರಿಗೆ ಬರುತ್ತೇನೆ. ವಿಡಿಯೋದಲ್ಲಿರುವುದು ಕೇವಲ ಗ್ರಾಫಿಕ್ಸ್ ಅಷ್ಟೇ. ಅಪ್ಪ, ಅಮ್ಮನನ್ನು ಹ್ಯಾಂಡಲ್ ಮಾಡು' ಎಂದು ಸಹೋದರರಿಗೆ ಕರೆಯಲ್ಲಿ ಹೇಳಿದ್ದಾಳೆ.