ಬೆಂಗಳೂರು: ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ನಾನು 2028ಕ್ಕೆ ಸಿಎಂ ಸ್ಥಾನಕ್ಕಾಗಿ ಕ್ಲೈಮ್ ಮಾಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆಯವರು ಕೇಳುವುದು, ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟದ್ದು. ನಾವು 28ಕ್ಕೆ ಕ್ಲೈಂ ಮಾಡ್ತೇವೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತ ಹೇಳಿದ್ದಾರೆ, ಬೇರೆಯವರು ಹೇಳುವ ಅಗತ್ಯವಿಲ್ಲ ಎಂದರು. ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಪಕ್ಷದ ತೀರ್ಮಾನವೇ ನನ್ನ ತೀರ್ಮಾನ. ಈಗ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಎಂದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠ ಸ್ವಾಮೀಜಿ ಹೇಳಿಕೆ:ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನಾಡಿನ ದೊರೆಯಾಗುವ ಶಕ್ತಿ ಇದೆ. ಬರುವ ದಿನಗಳಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ರಾಜ್ಯ ರಾಜಕೀಯದಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ದಲಿತರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬ ಸಂದೇಶ ಕಳುಹಿಸೋಣ" ಎಂಬ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು ಸಮುದಾಯದ ಪರವಾಗಿ ಹೇಳಿದ್ದಾರೆ. ಈಗ ಸಿಎಂ ಸ್ಥಾನ ಖಾಲಿ ಇಲ್ಲವಲ್ಲ? ಎಂದರು.