ಬೆಂಗಳೂರು: ಹೈ ವೋಲ್ಟೇಜ್ಗೂ ಉತ್ತರ ಕೊಡುತ್ತೇನೆ, ಲೋ ವೋಲ್ಟೇಜ್ಗೂ ಉತ್ತರ ಕೊಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ (ಆದಾಯ ತೆರಿಗೆ ಇಲಾಖೆ) ದಾಳಿ ಸಂಬಂಧ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನಕಲಿಗಳಿಗೂ ಉತ್ತರ ಕೊಡುತ್ತೇನೆ, ಲೂಟಿಗಳಿಗೂ ಉತ್ತರ ಕೊಡುತ್ತೇನೆ. ಎಲ್ಲರಿಗೂ ಉತ್ತರ ಕೊಡುತ್ತೇನೆ, ಸ್ವಲ್ಪ ಕಾಯಿರಿ ಎಂದು ತಿರುಗೇಟು ನೀಡಿದರು. ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಹೋರಾಟ ಮಾಡಲಿ, ಮಾಡಲೇಬೇಕು. ಪ್ರತಿಭಟನೆ ಮಾಡಿದಾಗಲೇ ಅವರ ಲೂಟಿಗಳೆಲ್ಲ ಜನರಿಗೆ ಗೊತ್ತಾಗುತ್ತದೆ. ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ನಿವಾಸದಲ್ಲಿ ಸಭೆ:ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದಲ್ಲಿ ಸಭೆ ನಡೆಯಿತು. ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಖರ್ಗೆ ನಿವಾಸದಲ್ಲಿ ಉಪಹಾರ ಸೇವಿಸಿ, ಸಭೆಯಲ್ಲಿ ಪಾಲ್ಗೊಂಡರು. ಐಟಿ ದಾಳಿ, ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಹೋರಾಟದ ಬಗ್ಗೆ ಸಮಾಲೋಚಿಸಿದರು. ಉಳಿದಂತೆ ನಿಗಮ ಮಂಡಳಿಗಳ ನೇಮಕಾತಿ ಸಂಬಂಧವೂ ಎಐಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.