ನವದೆಹಲಿ/ಬೆಂಗಳೂರು: ಮಹಾರಾಷ್ಟ್ರದಲ್ಲಿ ಇಂದು ನಡೆದ ರಾಜಕೀಯ ಬೆಳವಣಿಗೆ ತುಂಬಾ ಒಳ್ಳೆಯದು. ಈ ಬೆಳವಣಿಗೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಕರ್ನಾಟಕ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಇಂದು ವಿಪಕ್ಷನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಅವರು ಉಪಮುಖ್ಯಮಂತ್ರಿಯಾಗಿ ಹಾಗೂ ಇತರ 8 ಎನ್‌ಸಿಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ವೈ, ಇದು ತುಂಬಾ ಒಳ್ಳೆಯ ಬೆಳವಣಿಗೆ. ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯನ್ನು ನಾನು ಸ್ವಾಗತಿಸುತ್ತೇನೆ. ಎನ್‌ಸಿಪಿ ನಾಯಕರ ಈ ನಿರ್ಧಾರದಿಂದ ನಾನು ಮತ್ತು ಮಹಾರಾಷ್ಟ್ರದ ಜನತೆ ಕೂಡ ಖುಷಿಯಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ಕುರಿತು ಕಿಡಿಕಾರಿರುವ ಸಚಿವ ದಿನೇಶ್ ಗುಂಡೂರಾವ್, ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನಿಂದ ಸಾಧ್ಯವಿರುವ ಪ್ರತಿಯೊಂದು ನಿರ್ಲಜ್ಜ ನಡೆಯನ್ನೂ ಇಡುತ್ತಿದೆ. ಕರ್ನಾಟಕದಲ್ಲಿ ಇದೇ ರೀತಿಯ ಕುತಂತ್ರಗಳನ್ನು ನಡೆಸಿದ ನಂತರ ಬಿಜೆಪಿ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. ಮಹಾರಾಷ್ಟ್ರದಲ್ಲೂ ಬಿಜೆಪಿಯವರಿಗೆ ಇದೇ ಗತಿ ಆಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಎನ್ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡರು. ಇವರ ಜೊತೆಗೆ ಇತರ ಎಂಟು ಮಂದಿ ಎನ್‌ಸಿಪಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.