ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ನನಗೆ ದಿಗ್ಭ್ರಮೆ ಮತ್ತು ಆಶ್ಚರ್ಯ ತಂದಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿ, ಈ ಫಲಿತಾಂಶ ನನಗೆ ನಂಬಲು ಸಾಧ್ಯ ಆಗ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರು ಸೋತಿರೋದು ನೋವು ತಂದಿದೆ. ನನಗೆ ನಾನೇ ನಂಬಲು ಸಾಧ್ಯ ಆಗ್ತಿಲ್ಲ ಎಂದರು.
ದೇವೇಗೌಡ್ರು, ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟ ಚರಿತ್ರೆಯಲ್ಲಿದೆ. ಸಹೋದರ ಒಬ್ಬನೇ ಗೆದ್ದಿರೋದು ನನಗೆ ಖುಷಿಯಾಗಿಲ್ಲ. ಆಪರೇಷನ್ ಕಮಲ ವಿಚಾರದ ಬಗ್ಗೆ ಮಾತನಾಡಿ, ನಾನು ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ಅಲ್ಲದೆ, ಯಾವ ನಾಯಕರೂ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಬಾರದು ಎಂದು ಪಕ್ಷ ತಿಳಿಸಿದೆ. ಹೀಗಾಗಿ ನಾನು ಯಾವ ವಿಚಾರಗಳ ಬಗ್ಗೆ ಮಾತನಾಡಲ್ಲ ಎಂದರು.
ಡಿ.ಕೆ.ಶಿವಕುಮಾರ್ ಆಶೀರ್ವಾದ ಪಡೆದ ಕುಸುಮಾವತಿ ಶಿವಳ್ಳಿ ಜಿಂದಾಲ್ ವಿಚಾರ ಸಮರ್ಥನೆ:
ಸಾಕಷ್ಟು ಆಕ್ಷೇಪಗಳ ನಡುವೆಯೇ ಜಿಂದಾಲ್ ಜಮೀನು ನಿರ್ಣಯ ಸಮರ್ಥಿಸಿಕೊಂಡ ಡಿಕೆಶಿ, ಜಿಂದಾಲ್ಗೆ ಸಾವಿರಾರು ಎಕರೆ ಜಮೀನು ನೀಡೋ ನಿರ್ಣಯ ಸರಿ. ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿ ವಿಚಾರದಲ್ಲಿ ಇಂತಹ ನಿರ್ಣಯಗಳು ಬೇಕಾಗುತ್ತೆ. ಇನ್ಫೋಸಿಸ್ಗೆ ಮೈಸೂರಲ್ಲಿ ಜಮೀನು ನೀಡಿದಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಆದ್ರೆ, ಇದೀಗ ಆ ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಒಮ್ಮೊಮ್ಮೆ ಒಂದೊಂದು ಸಾರಿ ಕೆಲ ನಿರ್ಣಯಗಳನ್ನ ಮಾಡಬೇಕಾಗುತ್ತೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಬಳಿಕ, ತಮ್ಮ ನಿವಾಸದಿಂದ ತೆರಳಿದ ಅವರು ಸಿಎಂರನ್ನು ಭೇಟಿಯಾಗಿ ಸಮಾಲೋಚಿಸಲಿದ್ದಾರೆ. ಸಿಎಂ ಕುಮಾರಸ್ವಾಮಿ ಸದ್ಯ ಗೃಹ ಕಚೇರಿ ಕೃಷ್ಣದಲ್ಲಿದ್ದಾರೆ. ಅಲ್ಲಿಗೆ ಡಿಕೆಶಿ ತೆರಳಿದ್ದಾರೆ.
ಕುಸುಮಾವತಿ ಎಸ್ ಶಿವಳ್ಳಿಗೆ ಅಭಿನಂದನೆ:
ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭೆ ಕ್ಷೇತ್ರ ಮರುಚುನಾವಣೆಯಲ್ಲಿ ವಿಜೇತರಾದ ಕುಸುಮಾವತಿ ಎಸ್ ಶಿವಳ್ಳಿ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿ,ಆಶೀರ್ವಾದ ಪಡೆದರು.