ಬೆಂಗಳೂರು:ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ನಾನೇ ಸದ್ಯಕ್ಕೆ ತಡೆದಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಅರ್ಜಿ ವಿಚಾರವಾಗಿ ಸರ್ವರ್ ಸಮಸ್ಯೆ ನೋಡುತ್ತಿದ್ದೀರಿ. ಯೋಜನೆಯಲ್ಲಿ ಮನೆಯೊಡತಿಯೇ ಸ್ವಯಂ ಅರ್ಜಿ ಸಲ್ಲಿಸುವಂತೆ ಸರಳೀಕರಣ ಮಾಡಲಾಗುತ್ತಿದೆ. ಆನ್ಲೈನ್ ಹಾಗೂ ಆಫ್‌ಲೈನ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ವಿಚಾರವಾಗಿ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ಮಾಡಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೆಲವರು 200- 300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಗಿ ರದ್ದಾಗುತ್ತದೆ. ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ. ಈ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಲು ಹೋಗುವವರು ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ. ಯಾರಾದರೂ ಲಂಚ ಕೇಳಿದರೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಲಂಚ ಮುಕ್ತ ರಾಜ್ಯ ನಮ್ಮ ಗುರಿ ಎಂದು ತಿಳಿಸಿದರು.
ಬೊಮ್ಮಾಯಿ ಅವರು 2 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಬೆಂಗಳೂರಿನ ಅಭಿವೃದ್ಧಿಗೆ ಕೆಲವು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಆದರೆ ಅವರದ್ದು ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಆ ಯೋಜನೆಗಳನ್ನು ಜಾರಿ ಮಾಡಲು ಬಿಡಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅವರ ಸಲಹೆ, ಅಭಿಪ್ರಾಯ ಪಡೆಯಲಿದ್ದೇನೆ ಎಂದು ಹೇಳಿದರು.
ನಾನು ಈ ಹಿಂದೆ ಜಗದೀಶ್ ಶೆಟ್ಟರ್, ದೇವೇಗೌಡರು, ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಇರಲಿಲ್ಲ. ಸಾಧ್ಯವಾದರೆ ಅವರನ್ನು ಭೇಟಿ ಮಾಡುತ್ತೇನೆ. ಎಲ್ಲರ ಅನುಭವ ಅವರ ವಿಚಾರಧಾರೆ ಕೇಳಿ ಪಡೆಯುತ್ತೇನೆ. ಇದರಲ್ಲಿ ರಾಜಕಾರಣ ಯಾಕೆ?. ಅನ್ನಭಾಗ್ಯ ಯೋಜನೆ ತಡವಾಗಿಯಾದರೂ ಸರಿ ಜಾರಿ ಮಾಡುತ್ತೇವೆ. ಈ ಯೋಜನೆಯ ಜಾರಿ ವಿಚಾರವಾಗಿ ಬಡವರು, ಫಲಾನುಭವಿಗಳು ಹೋರಾಟ ಮಾಡುತ್ತಿಲ್ಲ. ಬದಲಿಗೆ ಹೊಟ್ಟಿ ತುಂಬಿರುವ ಕೆಲವರು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ಈ ಸರ್ಕಾರದಿಂದ ನಮಗೆ ಸಹಾಯವಾಗುತ್ತಿದೆ ಎಂದು ಬಡವರು ಸಂತೋಷದಿಂದ ಇದ್ದಾರೆ. ನಮ್ಮ ಅಕ್ಕ ತಂಗಿಯರು ನಮ್ಮ ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಧರ್ಮಯಾತ್ರೆ ಮಾಡುತ್ತಿದ್ದಾರೆ. ಅವರ ಖುಷಿ ನೋಡಲಾಗದೇ, ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಹೋರಾಟ ಮಾಡುತ್ತೇನೆ ಎಂದು ಸಂಕಟಪಡುತ್ತಿದ್ದಾರೆ. ಯಡಿಯೂರಪ್ಪನವರು ಧರಣಿ ಮಾಡುವುದರಲ್ಲಿ ಸಮರ್ಥರು. ಈಗಲೂ ಅವರು ವಿಧಾನಸಭೆಗೆ ಬಂದು ಹೋರಾಟ ಮಾಡಲಿ ಎಂದರು.