ಬೆಂಗಳೂರು: ಪ್ರತಿಯೊಂದು ಜಾತಿ ಮತ್ತು ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯುವುದಕ್ಕೆ ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲಾ ಸಮುದಾಯಗಳಿಗೂ ತಲುಪಿಸುವುದಕ್ಕಾಗಿ ನಾನೇ ಜಾತಿ ಗಣತಿ ಆರಂಭಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಹೇಳಿದ್ದ ಎಚ್ಚರಿಕೆ ಮಾತುಗಳನ್ನು ಮರೆಯಬಾರದು. ಜಾತಿ ಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಇದೇ ವೇಳೆ ಸಿಎಂ ಹೇಳಿದರು.
ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ:ಸುಖಾಸುಮ್ಮನೆ ಎಲ್ಲರಿಗೂ ಚಪ್ಪಾಳೆ ತಟ್ಟಬೇಡಿ. ನಿಮ್ಮಲ್ಲೊಂದು ತತ್ವ ಇರಲಿ. ಮೂರು ವರ್ಷಗಳಿಂದ ಕನಕಶ್ರೀ ಪ್ರಶಸ್ತಿಯನ್ನೇ ಕೊಟ್ಟಿಲ್ಲ. ಆದರೂ ಅವರಿಗೂ ಚಪ್ಪಾಳೆ ತಟ್ಟೋದು, ಇಲ್ಲಿ ಬಂದು ನನಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ನಿಮಗೆ ಸ್ಪಷ್ಟತೆ ಇರಲಿ, ಕನಕದಾಸರು ಒಂದು ಜಾತಿಗೆ ಸೇರಿದವರಲ್ಲ. ಕುರುಬ ಜಾತಿಯವರನ್ನು ಮೆಚ್ಚಿಸಲು ಕನಕ ಜಯಂತಿ ಮಾಡುತ್ತಿಲ್ಲ. ಕನಕದಾಸರು ವಿಶ್ವ ಮಾನವರಾಗಿದ್ದರು. ಅವರ ತತ್ವಾದರ್ಶಗಳನ್ನು ಪಾಲಿಸಿ ವಿಶ್ವ ಮಾನವರಾಗೋಣ ಎಂದು ಮನವಿ ಮಾಡಿದರು.
ಕನಕದಾಸರು ಆಕಸ್ಮಿಕವಾಗಿ ಕುರುಬರಾಗಿ ಹುಟ್ಟಿದ ವಿಶ್ವಶ್ರೇಷ್ಠ ಮಾನವೀಯ ಚೈತನ್ಯರಾಗಿದ್ದರು. ದಾಸ ಪಂಥಕ್ಕೆ ಪ್ರವೇಶಿಸುವ ಮೊದಲು ಅವರು ಪಾಳೇಗಾರರಾಗಿದ್ದರು. ಆದಿಕೇಶವನ ಭಕ್ತರಾಗಿ, ದಾಸರಾಗಿ, ದಾಸಶ್ರೇಷ್ಠರೂ ಆದರು. ಆದರೆ, ಕನಕದಾಸರ ಕೀರ್ತನೆಗಳಲ್ಲಿ ಅತ್ಯುನ್ನತ ಮಾನವೀಯ ಮೌಲ್ಯಗಳಿವೆ ಎಂದರು.