ಬೆಂಗಳೂರು: ಸಿಎಂ ಬೊಮ್ಮಾಯಿ ಭೇಟಿಯಾಗಿ ನನಗೆ ಆಗಿರುವ ಅನ್ಯಾಯ ತೋಡಿಕೊಂಡಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು ಮನವಿ ಮಾಡಿದ್ದೆ. ಇನ್ನೂ ನಾಲ್ಕು ಸ್ಥಾನಗಳಿವೆ. ಮುಂದೆ ವರಿಷ್ಠರ ಗಮನಕ್ಕೆ ತಂದು ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ನಾನು ಕೂಡ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡುತ್ತೇನೆ. ನಾನು ತ್ಯಾಗ ಮಾಡಿ ಬಂದಿದ್ದೇನೆ. ನನಗೆ ನ್ಯಾಯ ಕೊಡಲೇಬೇಕು ಎಂಬ ಒತ್ತಾಯಿಸಿರುವುದಾಗಿ ಹೇಳಿದರು.
ನಾನು ಸನ್ಯಾಸಿ ಅಲ್ಲ:ಅವತ್ತು ಸರ್ಕಾರ ತರಲಿಕ್ಕೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅವತ್ತು ನಾನು ಒಳ್ಳೆಯದು ಮಾಡಿದ್ದಕ್ಕೆ ಇವತ್ತು ನನಗೆ ಹೀಗೆ ಆಗಿದೆ. ನಾನೇನು ಸನ್ಯಾಸಿ ಅಲ್ಲ. ನಮ್ಮಲ್ಲಿ ಒಗ್ಗಟ್ಟು ಇದೆಯೋ, ಇಲ್ವೋ ಎಂಬ ಪ್ರಶ್ನೆ ಬೇಡ. ನಾನಂತೂ ಯಾರ ಪರ, ವಿರುದ್ಧವೂ ಮಾತಾಡಲ್ಲ. ಆದರೆ, ನನ್ನ ತ್ಯಾಗಕ್ಕೆ ಬೆಲೆ ಸಿಗಬೇಕು ಎಂದು ಕೇಳ್ತಿದ್ದೇನೆ ಅಷ್ಟೇ ಎಂದರು.