ಬೆಂಗಳೂರು: ನಾನಂತೂ ಬೆಂಗಳೂರು ನಗರದ ವಿಷಯದಲ್ಲಿ ನಗರಕ್ಕೆ ಮಾರಕವಾಗುವ ತೀರ್ಮಾನವನ್ನು ನನ್ನ ಎರಡು ಅವಧಿಯಲ್ಲೂ ತೆಗೆದುಕೊಂಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಳೆ ಹಾನಿ ಚರ್ಚೆ ವೇಳೆ ಮಾತನಾಡುತ್ತಾ, ಮಳೆ ಅನಾಹುತ ಈಗಿನಿಂದ ಆಗಿದ್ದಲ್ಲ. 1999 ಈಚೆಗೆ ಐಟಿ ಕ್ಷೇತ್ರ ವೇಗವಾಗಿ ಬೆಳೆಯ ತೊಡಗಿತು. ಆಗ ಬೆಂಗಳೂರಿನ ಅಭಿವೃದ್ಧಿ ದೊಡ್ಡ ಮಟ್ಟದಲ್ಲಿ ಆಯಿತು. ಮುಂದಾಗಬಹುದಾದ ಅನಾಹುತದ ಬಗ್ಗೆ ಯಾರೂ ಗಮನ ಕೊಡಲಿಲ್ಲ ಎಂದು ಹೇಳಿದರು.
ಸಚಿವ ಅಶ್ವತ್ಥ್ ನಾರಾಯಣ್ ಗೆ ತಿರುಗೇಟು: ಬೆಂಗಳೂರು-ಮೈಸೂರು ಯೋಜನೆಯಿಂದ ಕೆಲ ಸಮಸ್ಯೆ ಎದುರಾಗಿದೆ. ರಾಮನಗರದ ನಗರ ಪ್ರದೇಶದಲ್ಲಿ ನೆರೆ ಉಂಟಾಗಲು ಪಕ್ಕದ ಕೆರೆ ಕೋಡಿ ಒಡೆದಿರುವುದೇ ಕಾರಣ. ರಾಮನಗರ ಜಿಲ್ಲೆ ಘಟಾನುಘಟಿಗಳು ಇರುವ ಜಿಲ್ಲೆ. ಅಲ್ಲಿ ಏನೂ ಆಗಿಲ್ಲ. ಮೂರು ವರ್ಷದಲ್ಲಿ ನಾವು ಬಂದು ಮಾಡಿದ್ದೆವು ಎಂದು ಉಸ್ತುವಾರಿ ಸಚಿವರು ಜೋರಾಗಿ ಮಾತನಾಡಿದ್ದಾರೆ.
ಅವರು ಏನು ಮಾಡಿದ್ದಾರೆ ಎಂಬುದು ಸದನದ ಮುಂದೆ ಇಡುವುದು ಸೂಕ್ತ. 10 ವರ್ಷದಿಂದ ರಾಮನಗರದ ಅಭಿವೃದ್ಧಿ ಏನಾಗಿದೆ.? ಕಳೆದ ಮೂರು ವರ್ಷದಿಂದ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಸದನದ ಮುಂದೆ ಇಡಲಿ. ನನ್ನಿಂದ ಏನಾದರು ಲೋಪ ಆಗಿದೆಯಾ ಎಂಬ ಬಗ್ಗೆಯೂ ನನಗೆ ತಿಳಿಯುತ್ತದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಗೆ ತಿರುಗೇಟು ನೀಡಿದರು.
ಬೆಂಗಳೂರು ನೆರೆಗೆ ಕಾರಣ ಬಿಡಿಎ : ಯಾವತ್ತು ಬಿಡಿಎ ಹುಟ್ಟಿಕೊಂಡಿತೋ ಆಗಲೇ ಬೆಂಗಳೂರಿಗೆ ಗಂಡಾಂತರ ಪ್ರಾರಂಭವಾಯಿತು. ಕೆರೆಗಳಿದ್ದಿದ್ದರೆ ಈ ತರ ನೆರೆ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಕೆರೆ ಅಭಿವೃದ್ಧಿ ಪಡಿಸಿದ್ದರೆ ನೀರಿನ ಸಮಸ್ಯೆನೇ ಆಗುತ್ತಿರಲಿಲ್ಲ. ಮೇಕೆದಾಟಿಗಾಗಿ ಪಾದಯಾತ್ರೆ ಮಾಡುವ ಅವಶ್ಯಕತೆಯೇ ಇರಲಿಲ್ಲ ಎಂದು ತಿಳಿಸಿದರು.
ಕೆರೆ ಮುಚ್ಚಿ ನಿರ್ಮಿಸಲಾದ ಡಾಲರ್ಸ್ ಕಾಲೋನಿಯಲ್ಲಿ ಬಡವರಿಗೆ ನಿವೇಶನ ಕೊಟ್ಟಿದ್ದೀರಾ?. ಅಲ್ಲಿ ಎಲ್ಲ ಐಎಎಸ್ ಅಧಿಕಾರಿಗಳು, ಶ್ರೀಮಂತರಿಗೆ ನಿವೇಶನ ಕೊಟ್ಡಿದ್ದೀರಿ. ಹಲವು ಕೆರೆಯನ್ನು ಮುಚ್ಚಿ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಬಿಡಿಎ ಎಂದು ವಾಗ್ದಾಳಿ ನಡೆಸಿದರು.
ಸಿಂಗಾಪುರ ಮಾಡಲು ಹೋಗಿ ಹೀಗಾಗಿದೆ : ಒಂದು ಕಾಲದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು. ಸಿಂಗಾಪುರ ಮಾಡಲು ಹೋಗಿನೇ ಈ ತರ ಆಗಿದೆ ಎಂದು ಎಸ್.ಎಂ.ಕೃಷ್ಣಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಆವಾಗ ಎದ್ದುನಿಂತ ರಾಮಲಿಂಗಾ ರೆಡ್ಡಿ, ಅವರೂ ಬೆಂಗಳೂರು ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ಸಮರ್ಥಿಸಿದರು. ಇಲ್ಲ ನಾನು ಅವರು ಮಾಡಿದ್ದಾರೆ ಇವರು ಮಾಡಿದ್ದಾರೆ ಎಂದು ಆರೋಪ ಮಾಡಲ್ಲ ಎಂದರು.
ತೆರವಿಗೆ ರಾತ್ರೋರಾತ್ರಿ ಜ್ಞಾನೋದಯ : ಬೆಂಗಳೂರಿಗೆ ಶಾಶ್ವತ ಪರಿಹಾರ ಬೇಕು. ಸಿಎಜಿ ವರದಿಯಲ್ಲಿ ಕಾಲುವೆ ಮುಚ್ಚಿರುವುದರಿಂದ ಈ ನೆರೆ ಸಮಸ್ಯೆ ಎದುರಾಗಿದೆ ಎಂದು ಹೇಳಿದೆ. ನಾವು ತಾಂತ್ರಿಕವಾಗಿ, ಆರ್ಥಿಕವಾಗಿ ಬೆಳೆದಿದ್ದೇವೆ. ಆದರೆ ಜನರ ಸಂಕಷ್ಟವನ್ನು ಪರಿಹರಿಸಲು ಏಕೆ ಸಾಧ್ಯವಾಗುತ್ತಿಲ್ಲ. ರಾತ್ರೋರಾತ್ರಿ ನಿಮಗೆ ಜ್ಞಾನೋದಯ ಆಗಿದೆ. ಸಿಎಂ ಆದೇಶ ಕೊಟ್ಟ ಮೇಲೆ ಏಕೆ ಜ್ಞಾನೋದಯವಾಗಿದೆಯಾ ಎಂದು ಪ್ರಶ್ನಿಸಿದರು. ಸಿಎಂ ವಿವರವಾದ ಕಾರ್ಯಕ್ರಮ ಮಾಡಬೇಕು. ಈ ಬಗ್ಗೆ ಒಂದು ವಿಸ್ತೃತವಾದ ವರದಿ ತರಿಸಿ ಕ್ರಮ ಕೈಗೊಳ್ಳಿ. ಮಾನವೀಯತೆಯಿಂದ ಬಡ ಕುಟುಂಬದ ಬಗ್ಗೆ ಯೋಚಿಸಿ. ಇದು ಅವರು ಮಾಡಿದ ತಪ್ಪಲ್ಲ ಎಂದು ಹೇಳಿದರು.
ಇದನ್ನೂ ಓದಿ :ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆ