ಬೆಂಗಳೂರು: ಪಕ್ಷ ಸೇರ್ಪಡೆ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಎಂಪಿ ಆದಾಗಿನಿಂದ ಈ ಚರ್ಚೆ ಆಗುತ್ತಲೇ ಇದೆ. ನನ್ನ ಜನ ಮತ್ತು ನನ್ನ ಬೆಂಬಲಿಗರು ಏನು ಹೇಳ್ತಾರೆ ಅನ್ನೋದನ್ನು ಕೇಳುತ್ತೇನೆ. ನಾನು ಇನ್ನು ಪಕ್ಷ ಸೇರುವ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನನ್ನ ಕೋರ್ ಸಪೋರ್ಟರ್ಗಳು ನಿಮ್ಮ ನಿಲುವಿಗೆ ನಾವು ಬದ್ಧ ಎಂದು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಪಕ್ಷದ ಸೇರ್ಪಡೆ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.
ಸದ್ಯ ನನಗೆ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಪರಿಸ್ಥಿತಿ, ಸಂದರ್ಭ ನೋಡಿ ಪಕ್ಷ ಸೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೆನೆ. ನಾನು ಇನ್ನು ಯಾವುದೇ ನಿರ್ಧಾರ ತೆಗೆದುಕೊಳ್ಳದಿರೋದಕ್ಕೆ ಒತ್ತಡದ ಪಾಲಿಟಿಕ್ಸ್ ಅಲ್ಲ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ಕಾರ್ಯಕರ್ತರೆಲ್ಲರೂ ಚುನಾವಣೆಯಲ್ಲಿ ಬೆಂಬಲಿಸಿದ್ದರು. ಬಿಜೆಪಿ ಪಕ್ಷ ಬಹಿರಂಗವಾಗಿ ಬೆಂಬಲ ನೀಡಿದರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾರ್ಟಿ ಆದೇಶವನ್ನೇ ಧಿಕ್ಕರಿಸಿ ನನಗೆ ಬೆಂಬಲವಾಗಿ ನಿಂತಿದ್ದರು ಎಂದು ತಿಳಿಸಿದರು.
ತಟಸ್ಥರಾಗಿದ್ದರೆ ಅನುಕೂಲ ಎನ್ನುವುದು ಸದ್ಯದ ಚಿಂತನೆ. ಬಿಜೆಪಿ ಸೇರ್ಪಡೆ ಬಗ್ಗೆ ಹಲವು ಬಿಜೆಪಿ ನಾಯಕರು ಮಾತಾಡಿದ್ದಾರೆ. ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದಾರೆ. ಆದರೆ ನಾನು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಮಂಡ್ಯದಲ್ಲಿ ಅಭಿಷೇಕ್ ಸ್ಪರ್ಧಿಸೋ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಭಿಷೇಕ್ ಸ್ಪರ್ಧೆ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅವನು ಸಿನಿಮಾ ಮಾಡ್ತಾ ಇದ್ದಾನೆ. ಅಭಿಮಾನಿಗಳು, ಬೆಂಬಲಿಗರು ಚುನಾವಣೆಗೆ ನಿಲ್ಲಿಸಬೇಕು ಅಂತ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ ಅಭಿಷೇಕ್ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.