ಬೆಂಗಳೂರು:ಉಪಚುನಾವಣೆ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಚುನಾವಣೆ ಪೂರ್ವದಲ್ಲಿ ಮೈತ್ರಿ ಸರ್ಕಾರದಲ್ಲಿ ರಾಹುಲ್ ಗಾಂಧಿ ಈ ಜವಾಬ್ದಾರಿ ನೀಡಿದ್ದರು. ಅಂದಿನಿಂದ ಪ್ರತಿ ದಿನ ಒಂದೊಂದು ಘಟನೆ ಆಗುತ್ತಲೆ ಇತ್ತು. ಸರ್ಕಾರ ಅಸ್ಥಿರಗೊಳಿಸುವ ಸಂಚು ನಡೆಯುತ್ತಲೇ ಇತ್ತು. ನಾನು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ.ಎಲ್ಲ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಸಮಾಧಾನದಿಂದ ಪಕ್ಷವನ್ನು ಕಟ್ಟಿದ್ದೇನೆ. ಫಲಿತಾಂಶದ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದರು.
ಇದು ಉಪ ಚುನಾವಣೆಯಾದ್ದರಿಂದ ನೀವೇ ತೀರ್ಮಾನ ಮಾಡಿ ಎಂದು ಎಐಸಿಸಿಯವರು ಮಧ್ಯಸ್ಥಿಕೆ ವಹಿಸಿರಲಿಲ್ಲ, ಎಲ್ಲಾ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದರೂ ಕೂಡಾ ಅಂತಿಮವಾಗಿ ನನ್ನ ಒಪ್ಪಿಗೆ ಪಡೆಯದೇ ಯಾವುದೇ ತೀರ್ಮಾನವನ್ನು ಕೈಗೊಳ್ಳುತ್ತಿರಲಿಲ್ಲ, ಹಾಗಾಗಿ ಇದರಲ್ಲಿ ನನಗೆ ನೈತಿಕ ಹಾಗೂ ರಾಜಕೀಯ ಜವಾಬ್ದಾರಿ ಇದೆ, ಆದ್ದರಿಂದ ನಾನು ನಿನ್ನೆಯೇ ನಮ್ಮ ಹಿರಿಯ ನಾಯಕರೊಂದಿಗೆ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ್ದು, ಏನಾದರೂ ಹೆಚ್ಚು ಕಡಿಮೆ ಆದ್ರೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆ ಎಂದಿದ್ದಾರೆ.
ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದರಿಂದ ಇದರಲ್ಲಿ ನನಗೆ ಯಾವುದೇ ನೋವಿಲ್ಲ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಮಾಡಿದ್ದೇನೆ, ಮುಂದಿನ ತೀರ್ಮಾನವನ್ನು ಎಐಸಿಸಿ ಕೈಗೊಳ್ಳಲಿದ್ದು ನನ್ನ ಸಹಕಾರ ಯಾವಾಗಲೂ ಇರಲಿದೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆಯಿದೆ ಎಂದರು.