ಬೆಂಗಳೂರು:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿಡಿ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಲು ನನಗೆ ಇಷ್ಟ ಇಲ್ಲ. ರಾಜಕೀಯ ಮಾಡಲು ಬೇರೆ ಮಾರ್ಗಗಳು ಇವೆ ಎಂದು ಹೇಳಿದರು.
ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ನಮಗೆ ಶೋಭೆ ತರುವುದಿಲ್ಲ ಎಂದರು. ನನ್ನ ಸರ್ಕಾರ ಉರುಳಿಸಿದ್ದರೂ ನನಗೇನು ಬೇಜಾರಿಲ್ಲ. ರಾಕ್ಷಸ ಸರ್ಕಾರ ತೆಗೆದು ರಾಮರಾಜ್ಯ ತಂದಿದ್ದೇವೆ ಎಂದಿದ್ದಾರೆ ಅಲ್ಲವೇ?, ಈಗ ಯಾವ ಸರ್ಕಾರ ಇದೆ ಅನ್ನುವುದನ್ನು ಕುಳಿತು ಇವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.