ಬೆಂಗಳೂರು:ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲವಿಲ್ಲ. ಇದರಲ್ಲಿ ರಾಜಕೀಯ ಪ್ರೇರಿತವಾದ ಹೋರಾಟ ಇರಬಾರದು ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಂದು ಆರ್ಥಿಕತೆ ಆಧರಿಸಿ ಮೀಸಲಾತಿ ನೀಡಬೇಕು. ಇದು ಸಮಾಜಕ್ಕೆ, ಆಡಳಿತಕ್ಕೆ ತೊಂದರೆ ಮಾಡುವ ಹೋರಾಟ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10 ಶೇಕಡಾ ಮೀಸಲಾತಿ ನೀಡಲು ಮುಂದಾಗಿದೆ. ನಾವು ಅದನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಮುಂದಿನ ದಿನಗಳಲ್ಲಿ ಮೀಸಲಾತಿ ಸಿಗಬೇಕು. ಅದುಬಿಟ್ಟು ಈ ರೀತಿಯ ರಾಜಕೀಯ ಪ್ರೇರಿತ ಮೀಸಲಾತಿ ಯಾವ ಸಮಾಜಕ್ಕೂ ಒಳ್ಳೆಯದಲ್ಲ. ಇಂದು ಎಲ್ಲರಿಗೂ ಮೀಸಲಾತಿ ಬೇಕು ಅನ್ನೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆ, ಬಿಪಿಎಲ್ ಕಾರ್ಡ್ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಅರ್ಹತೆ ಇದ್ದವರಿಗೆ ಸಿಗಬೇಕು ಅನ್ನೋದು ನನ್ನ ವಾದ. ಯಾರಿಗೆ ಸೌಲಭ್ಯ ಸಿಗಬೇಕೋ ಅವರನ್ನ ಗುರುತಿಸಿ ಕೊಡುವ ಕೆಲಸ ಆಗಬೇಕಿದೆ. ಇಂದು ಎಲ್ಲರೂ ಸೌಲಭ್ಯ ಪಡೆದುಕೊಳ್ತಿದ್ದಾರೆ ಎಂದು ವಿವರಿಸಿದರು.
ಟಿವಿ, ಫ್ರಿಡ್ಜ್ ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಮೆರಿಟ್ಸ್ ಯಾವುದು ಅನ್ನುವುದರ ಒಟ್ಟಾರೆ ಹೇಳಿಕೆ ಇರಬಹುದು. ಚರ್ಚೆಗಳು ನಡೆದು ತೀರ್ಮಾನ ಆಗಬೇಕು. ಕಾರ್ಮಿಕ ಕೆಲಸಕ್ಕೆ ಹೋಗಲು ಅನುಕೂಲಕ್ಕಾಗಿ ಬೈಕ್ ಕೊಂಡಿರಬಹುದು. ಇದು ಕಡಿಮೆ ದರ್ಜೆಯ ಬೈಕ್ ಸಹ ಆಗಿರಬಹುದು. ಇಂದು ಟಿವಿ ಇಲ್ಲದ ಮನೆ ಇಲ್ಲ, ಎಲ್ಲ ಮನೆಯಲ್ಲೂ ಟಿವಿ ಇದೆ. ಇದರ ಬಗ್ಗೆ ಚರ್ಚೆಮಾಡಿ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಇದನ್ನೆಲ್ಲಾ ಪರಿಶೀಲಿಸಿ ವಿಸ್ತೃತ ಚರ್ಚೆ ಆಗಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.