ಬೆಂಗಳೂರು:ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆ, ಎಸ್ಎಫ್ಐ, ಎನ್ಎಸ್ಯುಐ, ಬೆಂಗಳೂರು ವಿವಿಯ ಸ್ನಾತಕೋತ್ತರ ಹಾಗೂ ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟ ಸೇರಿದಂತೆ ಹತ್ತಾರು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ರೋಹಿತ್ ಚಕ್ರತೀರ್ಥರನ್ನು ಪರಿಷ್ಕರಣ ಸಮಿತಿಯಿಂದ ಕೈಬಿಡುವಂತೆ ಆಗ್ರಹಿಸಿದ್ದು, ರಾಷ್ಟ್ರಕವಿ ಕುವೆಂಪು ನಿಂದನೆ ಹಿನ್ನೆಲೆ ಚಕ್ರತೀರ್ಥರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಹಾಗೆ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆಗೊಳಿಸಿರುವ ಪಠ್ಯಕ್ರಮವನ್ನು ರದ್ದುಗೊಳಿಸುವಂತೆಯೂ ಒತ್ತಡ ಹೇರಲಾಗುತ್ತಿದೆ.
ಈ ಮುಷ್ಕರದಲ್ಲಿ ಭಾಗಿಯಾಗಿರುವ ಭಗತ್ ಸಿಂಗ್ ಪಾಠದ ಲೇಖಕ ಎಸ್. ಜಿ. ರಾಮಕೃಷ್ಣ, ಪಠ್ಯ ಪುಸ್ತಕ ಸಮಿತಿ ವಿರುದ್ಧ ಹರಿಹಾಯ್ದಿದ್ದಾರೆ. ಇಡೀ ಹಗರಣವು ಅಕ್ರಮಗಳ ದೊಡ್ಡ ಸಂತೆಯಾಗಿದ್ದು, ಪಠ್ಯ ಪುಸ್ತಕ ಪರಿಷ್ಕರಣೆ ನ್ಯಾಯಬದ್ಧವಾಗಿ ಆಗಿಲ್ಲ. ಇಂತಹ ಸಮಿತಿ ನೇಮಕ ಮಾಡಿದ್ದರಿಂದ ಈ ಬಗ್ಗೆ ಬಹಿರಂಗವಾಗಿ ಹೇಳಿಲ್ಲ. ಈ ಹಿಂದೆ ಬರಗೂರು ಸಮಿತಿ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಿತ್ತು. ಪಠ್ಯದ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಬೇಕು, ಯಾಕೆ ಪರಿಷ್ಕರಣೆ ಅಂತಾ ತಿಳಿಸಬೇಕು. ಪರಿಷ್ಕರಣೆ ಮಾಡ್ತಾರೆ ಅಂದರೆ ಹಿಂದಿನ ಪುಸ್ತಕ ರದ್ದು ಆದ್ಮೇಲೆ ಹೊಸದಾಗಿ ಏನಾದರೂ ಮಾಡ್ತಾರಾ? ಅಥವಾ ಹಳೆಯದಕ್ಕೆ ಏನಾದರೂ ಒಗ್ಗರಣೆ ಹಾಕ್ತಾರಾ? ಹಾಗೆ ಒಗ್ಗರಣೆ ಹಾಕಬೇಕೇಕಾದರೆ, ಮತ್ತೇ ಆ ಲೇಖಕರನ್ನ ಸಂಪರ್ಕ ಮಾಡಬೇಕು ಅನ್ನೋ ಸೌಜನ್ಯ ಇಲ್ವಾ ಎಂದು ಪ್ರಶ್ನಿಸಿದರು.
ಹೊಸ ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ, ಲೇಖಕರ ಅನುಮತಿ ಕೇಳಬೇಕು ಅಲ್ವಾ? ಅವ್ರಿಗೆ ಇಷ್ಟ ಬಂದ ಹಾಗೆ ಮಾಡೋ ಸ್ವಾತಂತ್ರ್ಯ ಇಲ್ಲ. ಈ ಹಿಂದೆ ಸಮಿತಿಯು ಲೇಖನ ಬಳಕೆಗೆ ಅನುಮತಿ ಕೇಳಿದಾಗ, ನಾವು ಅನುಮತಿ ಕೊಟ್ಟಿದ್ದೆವು. ಆದರೆ ಈಗ ಇಂತಹ ಅಯೋಗ್ಯರ ಮಧ್ಯೆ ನನ್ನ ಹೆಸರು ಬರೋದು ಇಷ್ಟ ಇಲ್ಲ ಅಂತ ಆಕ್ರೋಶ ಹೊರಹಾಕಿದರು.