ಕರ್ನಾಟಕ

karnataka

ETV Bharat / state

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬೇಗ ಆಗಲಿ ಎಂದು ಹೈಕಮಾಂಡ್​​ಗೆ ಪತ್ರ ಬರೆದಿಲ್ಲ: ಪರಮೇಶ್ವರ್ - ಕೆಪಿಸಿಸಿ ಅಧ್ಯಕ್ಷರ ವಿಚಾರ

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೈಕಮಾಂಡ್​ಗೆ ನಾನು ಯಾವುದೇ ಪತ್ರ ಅಥವಾ ಮೇಲ್​​ ಕಳುಹಿಸಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್​​ ಸ್ಪಷ್ಟನೆ ನೀಡಿದ್ದಾರೆ.

Parameshwar
ಪರಮೇಶ್ವರ್

By

Published : Jan 20, 2020, 2:49 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ಇರುವುದಂತೂ ನಿಜ. ಆದರೆ ಈ ಸಂಬಂಧ ನಾನು ಹೈಕಮಾಂಡ್​ಗೆ ಯಾವುದೇ ಪತ್ರ ಬರೆದಿಲ್ಲ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಾನು ಯಾವ ಪತ್ರ ಅಥವಾ ಮೇಲ್ ಮಾಡಿಲ್ಲ. ನಮ್ಮ ಮನೆಯಲ್ಲಿ ಆದ ಸಭೆ ಬಗ್ಗೆ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದೇನೆ. ದಿನೇಶ್ ಗುಂಡೂರಾವ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗದೆ ತಟಸ್ಥವಾಗಿ ಇದ್ದಾರೆ. ಯಾರನ್ನು ನೇಮಕ ಮಾಡುತ್ತೀರಾ ಎಂದು ಆದಷ್ಟು ಬೇಗ ಘೋಷಣೆ ಮಾಡಿದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಈ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್, ಎಂ. ಬಿ. ಪಾಟೀಲ್ ಅವರ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ವಿಳಂಬವಾಗುತ್ತಿರುವುದು ಪಕ್ಷದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದಲ್ಲಿ ಮಧ್ಯಂತರವಾಗಿ ವಿಧಾನಸಭೆ ಚುನಾವಣೆ ಬರಲಿದೆ ಎಂದು ಕೆಲವರು ಮಾತಾಡುತ್ತಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ ಈ ದೃಷ್ಟಿಯಿಂದ ಬೇಗ ಘೋಷಣೆ ಮಾಡುವುದು ಒಳ್ಳೆಯದು ಎಂದರು.

ಪಕ್ಷದ ಹಿತದೃಷ್ಟಿಯಿಂದ ಸಿಎಲ್​​ಪಿ, ಎಲ್ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್​ಪಿ ಹೆಚ್ಚಿನದಲ್ಲ, ಎಲ್ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅದು ಆಯಾಯ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ ಎಂದರು.

ಈ ಎರಡು ಸ್ಥಾನ ಪ್ರತ್ಯೇಕಗೊಳಿಸಿದರೆ ರಾಜೀನಾಮೆ ಕೊಡ್ತೀನಿ ಅನ್ನೋದು ಸಿದ್ದರಾಮಯ್ಯ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಸಿದ್ದರಾಮಯ್ಯಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರದಲ್ಲೂ ಹೀಗೆ ಮಾಡಿದ್ದಾರೆ, ಇಲ್ಲೂ ಮಾಡಿದರೆ ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ ಎಂದು ಪರಮೇಶ್ವರ್​ ಹೇಳಿದರು.

ಯಡಿಯೂರಪ್ಪ ಅವರು ವಿದೇಶಕ್ಕೆ ಬಂಡವಾಳ ತರುತ್ತೇನೆ ಎಂದು ಹೋಗಿದ್ದಾರೆ. ಅವರು ನಮ್ಮ ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ಸರಿಯಾಗಿ ಅರ್ಥೈಸಿ ಬಂಡವಾಳ ತರಲಿ ಎಂದು ನಾನು ಆಶಿಸುತ್ತೇನೆ. ದೇಶದಲ್ಲಿ ಇರುವ ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳ ಬರುತ್ತಾ ಅನ್ನೊದು ಮುಖ್ಯ. ದೇಶದ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಹೇಳಬೇಕಲ್ಲ, ಅದನ್ನು ಸರಿಯಾಗಿ ತಿಳಿಸಿದರೆ ಹೂಡಿಕೆದಾರರು ಬರುತ್ತಾರೆ ಎಂದು ತಿಳಿಸಿದರು.

ABOUT THE AUTHOR

...view details